English Website

- ನೆನಪು - ಇನ್ನೆಲ್ಲಿಯಾದರೂ ಹುಟ್ಟಿದ್ದರೆ -

[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿಂದ ಆಯ್ದ ನೆನಪು]


ಪತ್ರಿಕೋದ್ಯಮದ ಬಗ್ಗೆ ೧೯೫೩ರಲ್ಲಿ ನಡೆದ ವಿಚಾರ ಸಂಕಿರಣದ ಉದ್ಘಾಟನೆಯನ್ನು ಮಾಡಲು ಸಂಘಟಕರು ಕುವೆಂಪು ಅವರನ್ನು ಆಹ್ವಾನಿಸಿದ್ದರಂತೆ. ಕಾರ್ಯದರ್ಶಿಗಳೊಬ್ಬರು ಸ್ವಾಗತ ಭಾಷಣ ಮಾಡುತ್ತ -‘"ಪುಟ್ಟಪ್ಪನವರು ಇಲ್ಲಿ ಹುಟ್ಟದೆ ಇನ್ನೆಲ್ಲಿಯಾದರೂ ಹುಟ್ಟಿದ್ದರೆ ಅವರ ಸ್ಥಾನಮಾನ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ, ಇನ್ನೂ ಎಷ್ಟೆಷ್ಟೊ ವಿಧವಾಗಿ ಉತ್ತಮವಾಗುತ್ತಿತ್ತು " ಎಂದು ಹೇಳಿದರಂತೆ. ಆಗ ಪುಟ್ಟಪ್ಪನವರು ಉತ್ತರಿಸುತ್ತ -‘" ಅವರ ದೃಷ್ಟಿಯಲ್ಲಿ ಜೀವನದ ಆದರ್ಶವೆಂದರೇನೆಂಬುದು ನನಗೆ ತಿಳಿಯದು.   ನಾನು ಇಲ್ಲಿ ಹುಟ್ಟದೆ, ಇಲ್ಲಿ ಇರದೆ, ಬೇರೆ ಕಡೆ ಹುಟ್ಟಿದ್ದರೆ, ಬದುಕಿದ್ದರೆ, ಇದಕ್ಕಿಂತ ಉತ್ತಮ ಸ್ಥಾನ ದೊರೆಯುತ್ತಿರಲಿಲ್ಲ. ನನಗೆ ಇಲ್ಲಿ ಈಗ ಏನು ದೊರೆತಿದೆಯೊ ಅದು ಇನ್ನೆಲ್ಲಿಯೂ ದೊರೆಯದು. ನಾನು ವಾಗ್ಮಿತೆಗಾಗಿ, ಅಲಂಕಾರಕ್ಕಾಗಿ ಮಾತಾಡುತ್ತಿಲ್ಲ; ಇದು ಯಥಾರ್ಥ ವಾಸ್ತವ ಸತ್ಯ. ಪರಚಾಟ, ಪೇಚಾಟ, ಅಲೆದಾಟ ಎಲ್ಲೆಲ್ಲಿಯೂ ಇದೆ; ವ್ಯಕ್ತಿಯಲ್ಲಿದೆ; ಜನಾಂಗ ಜನಾಂಗದಲ್ಲಿದೆ. ಇದಕ್ಕೆ ಅತೃಪ್ತಿ ಅಹಂಕಾರ ಮತ್ತು ಪ್ರತಿಷ್ಠಾಮೂಲವಾದ ಸ್ಪರ್ಧೆಗಳೆ ಕಾರಣ. ಇವು ಒಳಗಡೆ ಸೇರಿಬಿಟ್ಟರೆ ಎಲ್ಲಿರಲಿ, ಏನೇ ಸ್ಥಾನಮಾನ ಇರಲಿ, ಏನೇ ವೈಭವವಿರಲಿ ತೃಪ್ತಿ ಎಂದೆಂದಿಗೂ ಲಭಿಸುವುದಿಲ್ಲ. ಅರ್ಥಕಾರಣಗಳೆಲ್ಲ ವ್ಯರ್ಥ ಕಾರಣಗಳು; ಪ್ರತಿಷ್ಠೆ ಅಹಂಕಾರಗಳೇ ಮೂಲ ಕಾರಣ. ಕನ್ನಡ ಕವನಗಳ ತುತ್ತೂರಿ ಲಂಡನ್ ತನಕ ಹೋಗುವುದು ಬೇಡ. ಹವಾಯ್ ದ್ವೀಪಗಳಿಗೆ ಹೋಗುವುದು ಬೇಡ. ಅವನ್ನು ಇಲ್ಲಿಯವರು ನಮ್ಮ ಸುತ್ತಮುತ್ತಣದವರು ಓದಿ ಸಂತೋಷಪಡಲಿ ಸಾರ್ಥಕಪಡೆಯಲಿ, ಆಗ ಬರೆದವನಿಗೆ ಸಂತೋಷವಾಗುತ್ತದೆ ಜೀವನ ಸಾರ್ಥಕವಾಗುತ್ತದೆ " ಎಂದರಂತೆ.

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -