English Website

- ನೆನಪು - ಉಪ್ಪರಿಗೆ ಶಾಲೆ-ಐಗಳು -

[ದೇವಂಗಿ ಟಿ. ಚಂದ್ರಶೇಖರ್]

ಹೊತ್ತು ಪಿತ್ತದಂತೆ ನೆತ್ತಿಗೇರಿತ್ತು, ಮಧ್ಯಾಹ್ನ ಮಟಮಟ ಎನ್ನುತ್ತಿತ್ತು. ಕಾರು ನಿಂತಿತು. ಕುವೆಂಪುರವರ `ಮುದ್ದಿನ ಹಳ್ಳಿ ಕುಪ್ಪಳಿ' ಬಂತು. ಕಾಕಿ ಮನೆಯಲ್ಲಿ ಕಾರು ನಿಲ್ಲಿಸಿ, ಗದ್ದೆ ಅಂಚಿನ ಮೇಲೆ ಹೆಜ್ಜೆ ಹಾಕಿ ಸಾಗಿದೆವು. ಹೆಣ್ಣು ತೌರಿಗೆ ಬಂದಾಗ ಉಕ್ಕಿ ಬರುವ ಉತ್ಸಾಹ, ಹೆಮ್ಮೆ , ಬಿಗುಮಾನ, ಬಿಂಕ- ಈಗ ಪುಟ್ಟಪ್ಪನವರ ಮುಖದ ಮೇಲೆ ಲೀಲೆಯಾಡುತ್ತಿದ್ದವು. ಮಾತಿನ ಮಧ್ಯಮಧ್ಯೆ ಹಾಸ್ಯದ ಚಟಾಕಿಯೂ ಹಾರುತ್ತಿದ್ದವು. ಹೀಗೆ ಹಾರಿಸುತ್ತಿದ್ದಾಗ ಒಂದು ಸಾರಿ ನನ್ನ ಕೈಲಿ `ಢಂ' ಎನ್ನದೆ `ಢಸ್ಸೆ'ಂದು ಸತ್ತಿತು. "ನೋಡು! ಅದೇ ತಪ್ಪು! ಹಾಸ್ಯ ಇದ್ದ ಹಾಗೆಯೇ ಬಡಿಸಬೇಕು, ಚಿಪ್ಪೊಡೆದು ತಿರುಳು ತಿನ್ನುವ ಕಲೆ ರಸಿಕರಿಗೆ ಸೇರಿದ್ದು. ಹೇಳುವವರೇ ಅದನ್ನು ಒಡೆದು ರುಚಿ ಕೆಡಿಸಬಾರದು. ನೀವಾಗಿ ಆ ಗುಳ್ಳೆಯನ್ನು ಒಡೆಯಬಾರದು. ಹಾಸ್ಯವನ್ನು ಎಳೆಎಳೆಯಾಗಿ ಬಿಡಿಸಿದರೆ ಬರಿ ಜಾಳಾಗಿ ಕಂಡೀತು. ಒಡೆಯದ ಮುತ್ತಿನಂತಿರಬೇಕು ಅದು" ಎಂದು ನನಗೆ ಮಾರ್ಗ ತೋರಿದರು. ನಿಮಗೆ ಈಗ ಅಚ್ಚರಿಯಾಗಬಹುದು, ಹಿರಿದಾದ ಹೊತ್ತಿಗೆಗಳನ್ನು ಬರೆದ ಕೈ, ಹಾಸ್ಯದ ಹರಿಗೋಲನ್ನು ನಡೆಯಿಸೀತೇ? ಎಂದು. ಹೌದು! ಮಿದುವಾದ ಹಾಸ್ಯವೂ ಅವರ ಬಾಯಿಂದ ಆಗಾಗ್ಗೆ ತುಳುಕುತ್ತದೆ. ಅವರೊಂದಿಗೆ ಮಾತಿಗೆ ಕುಳಿತರೆ ಹೊಟ್ಟೆ ತುಂಬ ಹಾಸ್ಯ ಬಡಿಸುತ್ತಾರೆ. ಮಾತು ಸಾಗುತ್ತಿದ್ದಂತೆ ಮನೆಯೂ ಬಂತು.

ಆಗಲೇ ವೇಳೆಯಾದ್ದರಿಂದ ಊಟಕ್ಕೇಳಿಸಿದರು. ಎಲ್ಲರೂ ಊಟ ಹೊಡೆದು, ಕೊಂಚ ವಿಶ್ರಾಂತಿಗಾಗಿ ಮಹಡಿಯೇರಿದೆವು. ಹಾಗೆಯೇ ಸುಖಾಸೀನರಾಗಿ ಪುಟ್ಟಪ್ಪನವರು ಮನೆಯ ಮೇಲೆ ಮುತ್ತಿ ಬಂದ ತರುನಿಬಿಡ ಕಾನನರಾಶಿಯನ್ನು ಅವಲೋಕಿಸುತ್ತಿದ್ದರು. ತಾವು ಅಲ್ಲಿ ಹಿಂದೆ ಕಳೆದ ಸವಿದಿನಗಳ ನೆನಪನ್ನೂ ತಂದುಕೊಟ್ಟರು. "ನೋಡಿ, ಇಲ್ಲೇ ಇಷ್ಟಗಲಕ್ಕೆ ಮರಳುಹಾಸಿ ನಮ್ಮ ಮನೆ ಮೇಷ್ಟ್ರು `ಐಗಳು' ನಮಗೆ ಅ ಆ ಇ ಈ ಕಲಿಸುತ್ತಿದ್ದರು. ಆಗೇನು ವಿದ್ಯೆ ಅಂದರೆ ಈಗಿನಷ್ಟು ಸುಲಭವೇ ? ಕೈ ಬೆರಳನ್ನು ಒತ್ತಿ ಮರಳ ಮೇಲೆ ತಿದ್ದಿಸುತ್ತಿದ್ದರು, ಗೊತ್ತೆ?" ಎಂದು ಆ ಮಹಡಿಯ ಮೇಲೆ ಹಿಂದೆ ನಡೆಯುತ್ತಿದ್ದ ಮನೆಯ ಶಾಲೆಯನ್ನು ಬಣ್ಣಿಸಿದರು. ಮಾತು ಹೀಗೆಯೇ ಸಾಗಿ ಗೋಡೆ ಏರಿ ಸೂರುಮುಟ್ಟಿತು. ಅಲ್ಲಿಯ ಸೂರಿನ ಕಡೆ ಕೈತೋರಿ, "ನೋಡಿ ಆಗ ನಮಗೆ ಅದೇ ಕಳ್ಳಂಗಡಿ. ನಾವು ಇಲ್ಲಿ ಓದುತ್ತಾ ಕುಳಿತಿದ್ದಾಗ ಹಿರಿಯರು ಯಾರೂ ಇಲ್ಲದ ವೇಳೆ ನೋಡಿ ಮೆಲ್ಲಗೆ ಆ ಬಿರುಕಿನಲ್ಲಿ ನುಸುಳಿ, ಆಚೆಯ ಅಟ್ಟದಲ್ಲಿಟ್ಟಿದ್ದ ಹುರಿಗಡಲೆ, ಕೊಬ್ಬರಿ, ಬೆಲ್ಲವನ್ನು ಕಬಳಿಸುತ್ತಿದ್ದೆವು. ತಿಂಡಿಯ ಜೊತೆ ಅನೇಕ ಬಾರಿ ಬಾಸುಂಡೆಯನ್ನೂ ತಿಂದಿದ್ದೇವೆ" ಎಂದು ಹೇಳಿ ನಗಿಸಿದರು.

ಹೀಗೆಯೇ ಶಿಕಾರಿಯ ಮಾತು ಬಂದಾಗ, ಮಹಡಿಗೆ ಕಾಣುತ್ತಿದ್ದ ಅಡಿಕೆ ತೋಟದ ಒಂದು ದಿಕ್ಕಿನ ಕಡೆ ಕೈತೋರಿ ಪುಟ್ಟಪ್ಪನವರು, "ನನಗೀಗಲೂ ನೆನಪಿದೆ. ಹೀಗೆ ಒಮ್ಮೆ ಮಾತಾಡುತ್ತ ಕುಳಿತಿರುವಾಗ ಇಲ್ಲೇ ಆ ತೋಟದ ಆ ಮೂಲೆಯಲ್ಲಿ, ಕಾಡಿಗೆ ಕಾಡೇ ಅಲ್ಲೋಲವಾಗುವಂತೆ ಕೂಗು ಕೇಳಿಬಂತು. ಮೈರೋಮಾಂಚನಗೊಂಡಿತು. ಹುಲಿಗೂ ಹಂದಿಗೂ ಕಾಳಗವೇ ನಡೆದು ಹೋಯಿತು. ಒಮ್ಮೆ ಗರ್ಜನೆ, ಒಮ್ಮೆ ಹೂಂಕಾರ; ಒಮ್ಮೆ ಹೂಂಕಾರ, ಒಮ್ಮೆ ಗರ್ಜನೆ, ಕರ್ಣಾರ್ಜುನರಂತಹ ಪಟುಭಟರಿಬ್ಬರ ಕಲಿತನಕ್ಕೇನು ಕಮ್ಮಿಯಿರಲಾರದು, ಅಷ್ಟು ಭಯಾನಕವಾಗಿತ್ತು. ಕೊನೆಗೆ ಕೇಳುತ್ತ ಕೇಳುತ್ತ ಹೂಂಕಾರ ನಿಂತೇ ಹೋಯಿತು. ಈಗಲೂ ಕಿವಿಯಲ್ಲಿ ಅದೇ ಮೊಳಗು!" ಎಂದು ದೊಡ್ಡ ದೃಶ್ಯವನ್ನೇ ನಮ್ಮ ಕಣ್ಣಿಗೆ ಕಟ್ಟಿದರು.

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -