[ದೇವಂಗಿ ಟಿ. ಚಂದ್ರಶೇಖರ್]
ಒಂದು ಬೇಸಿಗೆಯಲ್ಲಿ ಅವರು ಶಿವಮೊಗ್ಗೆಗೆ ಬಂದಿದ್ದಾಗ "ನಾಳೆ ಕುಪ್ಪಳಿಗೆ ಹೋಗಿ ಬರೋಣವೆಂದಿದ್ದೇವೆ. ಬರುತ್ತೀಯಾ?" ಎಂದು ಕೇಳಿದರು. ಆ ಮಾತಿನಲ್ಲಿ ಆಹ್ವಾನವಿತ್ತು. ಹ್ಞೂ ಎಂದೆ.
ಮರುದಿನ ಬೆಳಗ್ಗೆ ಸುಮಾರು ಏಳು ಗಂಟೆ ಹೊತ್ತಿಗೆ ಅವರು ಕಾರಿನಲ್ಲಿ ತೀರ್ಥಹಳ್ಳಿಗೆ ಬಂದರು. ಅವರೊಂದಿಗೆ ನಾನೂ ಹೊರಟೆ. ಕಾರಿನ ಚಕ್ರ ನಾಲ್ಕಾರು ಸುತ್ತು ಮುಂದೆ ಉರುಳಿತ್ತೊ ಇಲ್ಲವೊ, ಕಾರು ಕೊಂಚ ನಿಲ್ಲಿಸುವಂತೆ ಹೇಳಿದೆ. ಎದುರುಗಡೆಯಿಂದ ತೀರ್ಥಹಳ್ಳಿಯ ಹಳೆಹುಲಿ `ಆರೆಕಪ್ಪ' (ಆರೋಗ್ಯಂ) ಬರುತ್ತಿದ್ದ. ಪುಟ್ಟಪ್ಪನವರ ಕಡೆ ನಾನು ತಿರುಗಿ, "ನೋಡಿ, ಅರಕಪ್ಪ, ನೆನಪಿದೆಯೆ?" ಎಂದೆ, ಸ್ವಲ್ಪ ನೆನಪು ಮಾಡಿಕೊಂಡು "ಓಹೋ!" ಎಂದು ಮಗುಳ್ನಕ್ಕರು. ಚಿಕ್ಕಂದಿನಲ್ಲಿ ಅವರು ತೀರ್ಥಹಳ್ಳಿಯಲ್ಲಿ ಚಕ್ಕಂದದಿಂದ ಕಳೆದ ಆ ಸವಿದಿನಗಳು ನೆನಪಿಗೆ ಬಂದಿರಬೇಕು, ಅವರಿಗೆ. ಅರೆಕಪ್ಪನೂ ತಲೆಬಾಗಿ "ನಮಸ್ಕಾರ ಬುದ್ದೀ" ಎಂದ, ಅವನ ಕಣ್ಣಲ್ಲಿ ಮಿಂಚು ಸಂಚರಿಸುತ್ತಿತ್ತು . "ಏನು ಅರೆಕಪ್ಪಾ, ಚೆಂದಾಗಿದೀಯಾ? ಈಗಲೂ ಅದೇ ಸ್ಕೂಲಾ?" ಎಂದರು.
" ಹೂಂ ಬುದ್ಧಿ, ಹೋಗಿ ಬರ್ತೀರಾ?" ಎಂದು ಬೀಳ್ಕೊಟ್ಟ. ಕಾರು ಮುಂದೆ ಸರಿಯಿತು. "ನಿಮಗೆ ಹೇಗೆ ಗುರುತಾದ ಇವನು, ಅಣ್ಣಾ?" ಎಂದು ಕೇಳಿದ ಪುಟ್ಟಪ್ಪನವರನ್ನು, ಮಗ ತೇಜಸ್ವಿ. ಆ ಹಳೆಯ ದಿನವನ್ನು ಅವರು ಮೆಲುಕು ಹಾಕಿ ಹೀಗೆಂದರು: "ನಾವು ಇಲ್ಲಿ ಸ್ಕೂಲಿಗೆ ಹೋಗುತ್ತಿದ್ದಾಗ ಇವನು ಶಾಲೆಯ ಜವಾನನಾಗಿದ್ದ. ಜವಾನ ಯಾಕೆ, ಹೆಡ್ಮಾಸ್ಟರೇ ಇವನು, ಎಷ್ಟೋಬಾರಿ. ಹೊಸ ಡಾಕ್ಟರಿಗಿಂತ ಹಳೇರೋಗಿ ಮೇಲು ಅನ್ನೋಲ್ಲವೇ? ಹಾಗೇ ಎಷ್ಟೋ ಹೊಸ ಹೆಡ್ಮಾಸ್ಟರಿಗಿಂತ ಈ ಹಳೆ ಜವಾನನೇ ಆಗಿಂದಲೂ ಮೇಲಾಗಿದ್ದ. ಮೇಷ್ಟರು ನಮಗೆ ಶಾಲೆಯೊಳಗೆ ಪಾಠ ಹೇಳಿದರೆ, ಶಾಲೆಯ ಹೊರಗಡೆಯೆಲ್ಲಾ ಇವನಿಂದಲೇ ಪಾಠ ನಮಗೆ. ಈಜಾಟ, ಗೋಲಿಯಾಟ, ಜೇನು ಕೀಳುವುದು, ಹೆಡ್ಮಾಸ್ಟರ ಕೈಬೆತ್ತವನ್ನು ಮಂಗಮಾಯ ಮಾಡುವುದು - ಎಲ್ಲದರಲ್ಲೂ ಇವನೇ ನಮಗೆ ಮುಂದಾಳು".