English Website

- ನೆನಪು - ಪರಭಾಷಾ ದುರಾಕ್ರಮಣ - ಇಂಗ್ಲಿಷ್ ಭಕ್ತರು -

[ಸುಜನಾ]

ಕನ್ನಡದ ವಿಷಯ ಬಂದಾಗ ಶ್ರೀ ಕುವೆಂಪು ಅವರು ಅತ್ಯಂತ ಜ್ವಲಂತವಾಗಿರುತ್ತಾರೆ. ಅವರ ಆ ಭಾವಕ್ಕೆ ಅಡ್ಡಿ ಬಂದ ಯಾರನ್ನೂ ಅವರು ಹಾಗೆಯೇ ಬಿಡುವುದಿಲ್ಲ. ಇದು ಇತ್ತೀಚಿನದಲ್ಲ. ಪ್ರಾಧ್ಯಾಪಕರಷ್ಟೆ ಆಗಿದ್ದಾಗಲೂ ಅವರು ಕನ್ನಡ ಪ್ರೇಮವನ್ನು ಅಷ್ಟೇ ನಿರ್ಭೀತಿಯಿಂದ ವ್ಯಕ್ತ ಪಡಿಸುತ್ತಿದ್ದರು. 1951 ರ ವೇಳೆಯಿರಬೇಕು, ಆ ವರ್ಷ ಪ್ರೊ. ಎ.ಆರ್. ವಾಡಿಯಾ ಅವರು ವಿಶ್ವವಿದ್ಯಾನಿಲಯದ ಘಟಿಕೋತ್ಸವದ ಉಪನ್ಯಾಸ ನೀಡಿದ್ದರು. ಅವರು ಪ್ರಾಂತ ಭಾಷೆಗಳಿಗೆ ವಿರುದ್ಧವಾಗಿಯೇ, ಇಂಗ್ಲಿಷ್ ಸ್ಥಾಪನ ಪರರಾಗಿಯೆ ತಮ್ಮ ಭಾಷಣ ನಡೆಸಿದ್ದರು. ಕೇಳಬೇಕೆ ಆಗ! ನಮ್ಮ ತರಗತಿಯಲ್ಲಿ ಕುವೆಂಪು ಅತ್ಯಂತ ಭಾವೋಜ್ವಲರಾಗಿ ಕೆಲವು ಮಾತಾಡಿದರು. " ನಾನು ನನ್ನ ವಿದ್ಯಾರ್ಥಿದೆಶೆಯಲ್ಲಿ ಹೆಚ್ಚು ಮೆಚ್ಚಿದ ನಾಲ್ಕು ಜನ ಪ್ರಾಧ್ಯಾಪಕರಲ್ಲಿ   ಶ್ರೀ ವಾಡಿಯಾ ಅವರು ಒಬ್ಬರು. ಅವರು ಹೀಗೆಂದರೆಂದು ಈಗ ಈ ಆತ್ಮಹತ್ಯಾಕಾರಿ ವಾದವನ್ನು ಹೇಗೆ ಸಹಿಸಿಕೊಳ್ಳುವುದು?" ಎಂದು ಸ್ವಲ್ಪ ಹೊತ್ತು ಆ ಬಗ್ಗೆ ನಿಶಿತವಾಗಿ ನಾಲ್ಕು ಮಾತಾಡಿದರು. ಅಷ್ಟಕ್ಕೆ ಆ ಮಾತು ನಿಲ್ಲಲಿಲ್ಲ. ಆ ದಿವಸವೇ ಯುವರಾಜ ಕಾಲೇಜಿನಲ್ಲಿ ಕಿಕ್ಕಿರಿದ ಒಂದು ಸಭೆ ಸೇರಿತು. ಪ್ರಧಾನ ಭಾಷಣಕಾರರು ಶ್ರೀ ಕುವೆಂಪು ಅವರೆ. ಆಗವರು ಆಡಿದ ಮಾತು ಕೂಡ ತರಗತಿಯ ಮಾತಿಗಿಂತ ಜ್ವಲಂತವಾಗಿದ್ದವು. "ನನಗೆ ನಮ್ಮ ವಿದ್ಯಾರ್ಥಿ ಜನಾಂಗದ ಬಗ್ಗೆ ವಿಶ್ವಾಸವಿದೆ. ಅವರಿಗೆ ಶಕ್ತಿ ಇಲ್ಲದಿಲ್ಲ. ಅವರು ದುರ್ಬಲರಲ್ಲ. ಹಾಗೆ ತೋರುತ್ತಿರುವುದಕ್ಕೆ ಈ ಪರಭಾಷಾ ದುರಾಕ್ರಮಣವೇ ಅತೀ ಮುಖ್ಯ ಕಾರಣ. ಗಾಂಧೀಜಿ ಈಗ ಬದುಕಿದ್ದರೆ ನಮ್ಮನ್ನು ಇಂಥವರಿಂದ ಬಿಡಿಸಲು ಅವರ ವಿರುದ್ಧ ಹೋರಾಡುತ್ತಿದ್ದರು...... ಅಂದು ದೇಶೀಯ ವಸ್ತ್ರಕ್ಕಾಗಿ ಸ್ವಾತಂತ್ರ್ಯಾಪೇಕ್ಷೆಯ ಸಂಕೇತವಾಗಿ ವಿದೇಶಿಯ ಬಟ್ಟೆ ಸುಡಿರೆಂದಂತೆ ಅವರು ಈಗ ಇದ್ದಿದ್ದರೆ ವಿದೇಶೀಯ ಪುಸ್ತಕಗಳನ್ನು ಸುಡಿರಿ ಎನ್ನುತ್ತಿದ್ದರು. " ಎಂದು ಹೇಳಿ ಇಂಗ್ಲಿಷ್ ಭಕ್ತರನ್ನೂ ಶ್ರೀ ವಾಡಿಯಾ ಅವರನ್ನೂ ಸಹ ಅತ್ಯಂತ ನಿಶಿತವಾಗಿ ಖಂಡಿಸಿದರು. ಕನ್ನಡ ಅವರಿಗೆ ಚರ್ಮಕ್ಕಚ್ಚಿದ ಬಣ್ಣವಲ್ಲ. ಒಳಧರ್ಮವಾಗಿದೆ, ಎಂಬುದನ್ನು ಅಂದಿನ ಅವರ ಉಗ್ರ ಭಾಷಣ ನಮಗೆ ಸ್ಪಷ್ಟಪಡಿಸಿತು.

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -