English Website

- ನೆನಪು - ಗೀಜಗನ ಗೂಡು ಮತ್ತು ಕವಿ -

[ಅಲಿಗೆ ಪುಟ್ಟಯ್ಯ ನಾಯಕರು]


ಒಂದು ದಿನ ಕುವೆಂಪು, ಅವರ ಭಾವನೆಂಟ ರತ್ನಾಕರ ಮತ್ತು ನಾನು ಮೂವರು ರತ್ನಾಕರರ ಅಡಿಕೆ ತೋಟಕ್ಕೆ ಹೋಗಿದ್ದೆವು. ಅಲ್ಲಿ ಸೊಂಪಾಗಿ ಬೆಳೆದಿದ್ದ ಅಡಿಕೆ ಗಿಡಗಳನ್ನು ನೋಡಿ ಕುವೆಂಪು ಅವುಗಳಿಗೆ ಕೊಡುವ ಆಹಾರ ಮೊದಲಾದುವುಗಳ ಬಗ್ಗೆ ಅದೂ ಇದೂ ಪ್ರಶ್ನಿಸುತ್ತಿದ್ದರು. ತೋಟವನ್ನು ನೋಡಿದ ನಂತರ ನಾವು ತುಂಗಾ ನಾಲೆಯನ್ನು ದಾಟಿ ವಾಪಸ್ಸು ಬರಲು ಕಾಡಿನ ಕಡೆಗೆ ಬಂದೆವು. ಅಷ್ಟರಲ್ಲಿ ರತ್ನಾಕರ ‘ಓಹೋ ಕತ್ತಿಯನ್ನು ಮರೆತು ಬಂದೆ, ತರುತ್ತೇನೆ, ನೀವು ಹೋಗುತ್ತಿರಿ’ ಎಂದು ಹಿಂದಕ್ಕೆ ಓಡಿದರು. ಆಗ ಕುವೆಂಪು ನನ್ನನ್ನು ಕುರಿತು “ಬನ್ನಿ, ಇಲ್ಲಿ ಒಂದು ವಿಶೇಷ ತೋರಿಸುತ್ತೇನೆ” ಎಂದು ಹೇಳಿ ನಾಲೆಯ ಬಳಿ ಮುಳ್ಳು ಮರದ ಕಿರು ಹರೆಯ ತುದಿಯಲ್ಲಿ ನೇತಾಡುತ್ತಿದ್ದ ಗರಿಗೆ ಹಕ್ಕಿಯ ಗೂಡುಗಳನ್ನು ತೋರಿಸಿ ಹೀಗೆಂದರು: “ನೋಡಿ ಇಲ್ಲಿ, ಮಾನವ ತಾನೆ ಮಹಾ ಬುದ್ಧಿವಂತ, ದೇವರು ನನ್ನೊಬ್ಬನಿಗೇ ಬುದ್ಧಿ ಶಕ್ತಿ ಕೊಟ್ಟಿರುವುದು, ಎಂದು ಹೇಳಿಕೊಳ್ಳುತ್ತಾನೆ. ಈ ಹಕ್ಕಿಯ ಬುದ್ಧಿಶಕ್ತಿ ಯಾವ ಮಾನವನ ಬುದ್ಧಿ ಶಕ್ತಿಗೆ ಕಡಿಮೆಯಿದೆ ಹೇಳಿ. ಹಕ್ಕಿ ಗೂಡು ಕಟ್ಟಿರುವ ಸ್ಥಳವನ್ನಾದರೂ ನೋಡಿ, ಅದರ ಉದ್ದೇಶ ಅರ್ಥವಾಗುತ್ತದೆ. ಮರ ಹರಿಯುವ ನಾಲೆಯ ದಡದಲ್ಲಿದೆ. ಅಲ್ಲದೆ ನಾಲೆಯ ಕಡೆಗೆ ಬಾಗಿದೆ. ಜೊತೆಗೆ ಅದು ಮೈತುಂಬ ಮುಳ್ಳಿರುವ ಮರ, ಶತ್ರು ನೀರಿರುವ ನಾಲೆಯನ್ನು ದಾಟುವುದು ಕಷ್ಟ, ದಾಟಿದರೂ ಸಹ ಮುಳ್ಳಿನ ಮರ ಏರಬೇಕು, ಒಂದು ವೇಳೆ ಅದನ್ನು ಏರಿದರೂ ಸಹ ಗೂಡನ್ನು ಮುಟ್ಟಲು ಸಾಧ್ಯವಿಲ್ಲ. ಏಕೆಂದರೆ ಅದನ್ನು ಮರದ ಕೊಂಬೆಯ ತುದಿಗೆ, ಅದರಲ್ಲೂ ಹಂಚಿಕಡ್ಡಿಯಂತಹ ಹರೆಗೆ ಕಟ್ಟಿದೆ. ಇದನ್ನೆಲ್ಲ ಅದು ಹೇಗೆ ಯೋಚನೆ ಮಾಡಿತು? ಅಲ್ಲದೆ ಈ ಗರಿಗೆ ಹಕ್ಕಿ ಕಟ್ಟಿರುವ ಗೂಡು ನೋಡಿ, ಎಷ್ಟೊಂದು ಸುಂದರವಾಗಿದೆ. ಅದಕ್ಕೆ ಬಳಸಿರುವ ಹುಲ್ಲಾದರೂ ಎಷ್ಟೊಂದು ಸಣ್ಣ ! ಅದನ್ನು ಹೇಗೆ ತಂದೀತು? ಹುಲ್ಲು ಇಷ್ಟು ಸಣ್ಣದಾಗಿರುವುದು ದೊರೆಯುತ್ತದೆಯೆ? ದೊರೆಯುವುದು ಕಷ್ಟ. ಬಹುಶಃ ಹುಲ್ಲನ್ನು ಒಂದೇ ಅಳತೆಗೆ ಕೊಕ್ಕಿನ ಸಹಾಯದಿಂದ ಅಷ್ಟೊಂದು ಸಣ್ಣದಾಗಿ ಸೀಳಿರಬೇಕು, ಹಾಗೆ ಸೀಳಬೇಕಾದರೆ ಎಷ್ಟು ಜಾಣ್ಮೆ ಬೇಕು, - ಒಂದು ವೇಳೆ ಸೀಳಿದರೂ ಸಹ ಅದನ್ನು ಕಟ್ಟುವ ಕಲೆ, ಎಷ್ಟು ಅದ್ಭುತವಾದುದು, ಎಷ್ಟು ಕಷ್ಟ! ಪ್ರತಿ ಎಳೆ ಎಳೆಯನ್ನು ಹೆಣೆಯಬೇಕು. ಒಂದು ಕಡೆಯಿಂದ ಕೊಕ್ಕಿನಲ್ಲಿ ತೂರಿಸಿ ಮತ್ತೊಂದು ಕಡೆಯಿಂದ ಎಳೆಯಬೇಕು. ಅಂದರೆ ಈ ಗರಿಗೆ ಹಕ್ಕಿ ಹುಲ್ಲನ್ನು ಹುಡುಕುವುದನ್ನು ಹುಡುಕಿ ತರುವುದನ್ನು ತಿಳಿದುದಲ್ಲದೆ ಅದನ್ನು ಸೀಳಿ ಹೆಣೆಯುವುದನ್ನೂ ಬಲ್ಲದು. ಅಂದರೆ ತಾನೆ ಬಡಗಿಯ ಕೆಲಸ ಮಾಡಿತು, ತಾನೆ ನೇಯ್ಗೆಯ ಕೆಲಸವನ್ನು ಮಾಡಿತು. ಅದರೆ ಇಷ್ಟರಿಂದಲೇ ಆ ಗೂಡಿನ ಕೆಲಸ ಮುಗಿದಂತಾಗುವುದಿಲ್ಲ. ತಾನು ಶತ್ರುಗಳಿಂದ ಪಾರಾಗುವುದಕ್ಕೆ ಬಹಳ ಭದ್ರವಾದ ಜಾಗವನ್ನು ಕಂಡುಹಿಡಿಯುವುದರ ಜೊತೆಗೆ ಮಳೆ ಬಂದರೆ ನೀರು ಗೂಡಿನ ಒಳಗಡೆ ಹೋಗದ ಹಾಗೆ, ಬಿಸಿಲು ಬೀಳದ ಹಾಗೆ, ಶತ್ರುಗಳಿಗೆ ತನ್ನ ವಾಸಸ್ಥಳ ತಿಳಿಯದ ಹಾಗೆ ಇರಲಿ ಎಂದು ಬಾಯನ್ನು ಕೆಳಮುಖವಾಗಿ ಮಾಡಿತು. ಅಲ್ಲದೆ ಕೆಳಗಡೆಯಿಂದ ಹಾರಿ ಒಳಗೆ ಹೋಗಿ ಕೂರಬೇಕಾದರೆ, ಮೊಟ್ಟೆ ಇಡಬೇಕಾದರೆ ಅನುಕೂಲವಾಗುವಂತೆ ಆಲೋಚಿಸಿ ಬೇರೊಂದು ಕೊಠಡಿಯನ್ನೆ ಕಟ್ಟಿತು. ಇಷ್ಟೆಲ್ಲಾ ಪ್ಲಾನು ಹಾಕುವುದನ್ನು ಆ ಹಕ್ಕಿ ಹೋಗಿ ಯಾವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಭ್ಯಾಸ ಮಾಡಿತು, ಯಾವ ಸಂಸ್ಥೆಯಲ್ಲಿ ಪ್ರಾಕ್ಟಿಕಲ್ ಮಾಡಿ ತೋರಿಸಿತು. ನೋಡಿ, ಮನುಷ್ಯ ತನ್ನ ಜೀವಮಾನದಲ್ಲಿ ಹೆಚ್ಚು ಕಡಿಮೆ ಅರ್ಧಭಾಗವನ್ನೆಲ್ಲ ಕಲಿಯುವುದರಲ್ಲೇ ಕಳೆಯುತ್ತಾನೆ ಬಾಳುವುದೇ ಕಡಿಮೆ. ಆದರೆ ಈ ಹಕ್ಕಿಗಳು ಹುಟ್ಟಿದ ಕೂಡಲೆ ಬಾಳನ್ನು ಆರಂಭಿಸುತ್ತವೆ. ಇಷ್ಟೆಲ್ಲಾ ಆದರೂ ಈ ಹಕ್ಕಿಯ ಗೂಡು ಎಷ್ಟೊಂದು ಅಂದವಾಗಿದೆ ನೋಡಿ. ಯಾವ ಶಿಲ್ಪಿಯ ಕುಶಲಗಾರಿಕೆಯ ಕೆಲಸಕ್ಕೆ ಕಡಿಮೆ ಇದೆ ಈ ಗೂಡು ? ಮನುಷ್ಯ ಒಂದು ಕಲೆಯನ್ನೇ ಚೆನ್ನಾಗಿ ತಿಳಿಯುವುದು ಕಷ್ಟ. ಹೀಗಿರುವಾಗ ಈ ಹಕ್ಕಿಗಳಲ್ಲಿ ಎಷ್ಟೊಂದು ಕಲೆ ಅಡಗಿರುತ್ತದೆ. ಅವುಗಳನ್ನು ಆ ಹಕ್ಕಿಗಳು ಎಷ್ಟು ಚೆನ್ನಾಗಿ ಅರಿತಿರುತ್ತವೆ ಎನ್ನುವುದಕ್ಕೆ ಈ ಗೂಡೆ ನಿದರ್ಶನ. ಹೀಗಿರುವಾಗ ಮಾನವ ತಾನೇ ಪ್ರಾಣಿಗಳಿಗಿಂತ ಬುದ್ಧಿವಂತ ಎಂದು ಹೇಳುವುದಾದರೂ ಹೇಗೆ?

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -