English Website

- ಜೀವನ ಚರಿತ್ರೆ - ಕನ್ನಡದಲ್ಲಿ ಕವನ ರಚನೆ -
ಪೀಠಿಕೆ

ಕುವೆಂಪು ಅವರ ಜನನ, ಬಾಲ್ಯ ಹಾಗೂ ಜೀವನ

ಅಕ್ಷರಾಭ್ಯಾಸ - ಶಾಲಾಜೀವನ

ಬಾಲ್ಯದ ಗುರುವಾದ ಒಂದು ಕವಿತೆ

ಮೈಸೂರಿನಲ್ಲಿ ವಿದ್ಯಾಭ್ಯಾಸ

ಮೊದಲ ಇಂಗ್ಲಿಷ್ ಕವನ

ವಸಾಹತು ಸಂದರ್ಭದಲ್ಲಿ ಕರ್ನಾಟಕ

ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ರ ಭೇಟಿ

ಕನ್ನಡದಲ್ಲಿ ಕವನ ರಚನೆ

ಕಲ್ಕತ್ತೆಗೆ ಪಯಣ

ಕೌಟುಂಬಿಕ ಜೀವನ

ಅಧ್ಯಾಪನ, ಸಾಹಿತ್ಯ ಸೃಷ್ಟಿ

೧೯೯೪ ರ ನಂತರದಲ್ಲಿ ಕವಿಮನೆ - ಕವಿಶೈಲ
 


[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿ೦ದ ಆಯ್ದ ಭಾಗ]

ಸಾಹಿತ್ಯದ ದೃಷ್ಟಿಯಿಂದ ಕುವೆಂಪು ಮತ್ತು ಈ ಶತಮಾನದ ಕನ್ನಡ ಸಾಂಸ್ಕೃತಿಕ ಸಂದರ್ಭದಲ್ಲಿ ೧೯೨೪ ಕ್ರಾಂತಿಕಾರಕ ಸಂಧಿಕಾಲವೆನ್ನಬಹುದು. ಪಾಶ್ಚಾತ್ಯ ಸಾಹಿತಿಗಳ, ದಾರ್ಶನಿಕರ, ಸಂತರ, ಋಷಿಗಳ ವಿಚಾರಧಾರೆಗೆ ಮಾರುಹೋಗಿದ್ದ ಆ ಕವಿಚೇತನ ತನ್ನ ಸ್ವದೇಶೀ ನೆಲೆಗೆ ಮುಖಮಾಡಿದ್ದು ಒಂದು ಕ್ರಾಂತಿಕಾರಕವಾದ ಘಟನೆಯೆ ಆಗಿದೆ.

ಈ ಘಟನೆಯ ಪ್ರಭಾವದಿಂದಲೇ ಅವರ ಮೊದಲ ಕನ್ನಡ ಕವಿತೆ `ಪೂವು' ಹುಟ್ಟಿದ್ದು. ಹೀಗೆ ಪುಟ್ಟಪ್ಪನವರ ಕಾವ್ಯ ಜೀವನದಲ್ಲಿ ಹೊಸ ಅಧ್ಯಾಯವೊಂದು ಪ್ರಾರಂಭವಾಯಿತು. ಅವರ ಕನ್ನಡದ ಮೊದಲ ಪ್ರಕಟಿತ ಕವನವಾದ `ಅಮಲನ ಕಥೆ'ಯನ್ನು ೧೯೨೩ರಲ್ಲಿಯೇ, ಅಂದರೆ ಕಸಿನ್ಸ್ ಅವರನ್ನು ಭೇಟಿಯಾಗುವುದಕ್ಕಿಂತ ಮೊದಲೇ ಬರೆದಿದ್ದರೆಂಬ ಸೂಚನೆ `ನೆನಪಿನ ದೋಣಿ' ಯಲ್ಲಿದೆ. ಆದರೂ ಕಸಿನ್ಸ್ ಅವರನ್ನು ಕಂಡ ಮೇಲೆ ಪುಟ್ಟಪ್ಪನವರ ಕಾವ್ಯ ಆಂಗ್ಲ ಸಾಹಿತ್ಯದಿಂದ ಪ್ರೇರಣೆಗೊಂಡು, ಕನ್ನಡದಲ್ಲಿ ಹೊಸ ಹೊಸ ಪ್ರಯೋಗಗಳಿಗೆ ಒಳಗಾಯಿತು.

೧೯೨೬ರಲ್ಲಿ ಶ್ರೀ ರಾಮಕೃಷ್ಣಾಶ್ರಮದಲ್ಲಿ ನೆಲೆಸಿದ ನಂತರ ಅವರ ಕಾವ್ಯಜೀವನ ಹಾಗೂ ಆಧ್ಯಾತ್ಮ ಸಾಧನೆಗೆ ಪ್ರಶಸ್ತವಾದ ಪರಿಸರ ದೊರೆಯಿತು. ಹಾಗಾಗಿ ಆ ಕಾಲದಲ್ಲಿ `ಮೋಡಣ್ಣನ ತಮ್ಮ', `ಹಾಳೂರು', `ಬೊಮ್ಮನಹಳ್ಳಿಯ ಕಿಂದರಿ ಜೋಗಿ' ಮೊದಲಾದ ಕೃತಿಗಳು ಕೇವಲ ಒಂದೇ ವರ್ಷದ ಅವಧಿಯಲ್ಲಿ (೧೯೨೬) ರಚಿತವಾದವು.

ಪುಟ್ಟಪ್ಪನವರ ಹೆಸರು ಈ ಹೊತ್ತಿಗೆ ಕನ್ನಡ ನಾಡಿನಲ್ಲೆಲ್ಲಾ ಪ್ರಸಿದ್ಧವಾಗಿತ್ತು. ೧೯೨೭ರಲ್ಲಿ ಮೈಸೂರು ವಿಶ್ವವಿದ್ಯಾಲಯ ಕನ್ನಡ ಎಂ.ಎ. ತರಗತಿಗಳನ್ನು ಪ್ರಾರಂಭಿಸಿತು. ಎ.ಆರ್. ಕೃಷ್ಣಶಾಸ್ತ್ರಿಗಳ ಒತ್ತಾಯದ ಮೇರೆಗೆ ತತ್ತ್ವಶಾಸ್ತ್ರದ ವಿದ್ಯಾರ್ಥಿಯಾಗಬೇಕಾಗಿದ್ದ ಪುಟ್ಟಪ್ಪನವರು ಕನ್ನಡ ಎಂ.ಎ.ಗೆ ಸೇರಿದರು. ಎಂ.ಎ. ತರಗತಿಯಲ್ಲಿ ಪಾಠ ಹೇಳುತ್ತಿದ್ದ ಮುಖ್ಯ ಗುರುಗಳೆಂದರೆ ಎ.ಆರ್. ಕೃಷ್ಣಶಾಸ್ತ್ರಿ, ಟಿ.ಎಸ್. ವೆಂಕಣ್ಣಯ್ಯ, ಬಿ.ಎಂ. ಶ್ರೀಕಂಠಯ್ಯ, ಸುಬ್ಬರಾಯಶಾಸ್ತ್ರಿ, ಸಿ.ಆರ್. ನರಸಿಂಹಶಾಸ್ತ್ರಿ, ಆರ್. ಅನಂತಶರ್ಮ ಮುಂತಾದವರು. ಮೈಸೂರು ವಿಶ್ವವಿದ್ಯಾಲಯದ ಮೊದಲ ಎಂ.ಎ. ತರಗತಿಯ ಸಹಪಾಠಿಗಳಲ್ಲಿ ಮುಖ್ಯರೆಂದರೆ ಡಿ.ಎಲ್. ನರಸಿಂಹಾಚಾರ್, ಡಿ.ಕೆ. ಭೀಮಸೇನರಾವ್, ಎನ್. ಅನಂತರಂಗಚಾರ್, ಕೆ.ವೆಂಕಟರಾಮಪ್ಪ, ಮುತ್ತಾನಾಗೇಶಾಚಾರ್, ಬಿ. ನಂಜುಂಡಯ್ಯ, ಬಿ.ಎಸ್. ವೆಂಕಟರಾಮಯ್ಯ ಮತ್ತು ಎಂ.ಎ. ಅಳಸಿಂಗಾಚಾರ್. ಈ ಮೇಲಿನ ಗುರು ಮತ್ತು ಸಹಪಾಠಿಗಳೆಲ್ಲರೂ ಮುಂದೆ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಶಕ್ತ್ಯಾನುಸಾರ ಹೆಸರು ಮಾಡಿದವರು. ಎಂ.ಎ. ತರಗತಿಗೆ ಸೇರಿದ ಆರಂಭದಲ್ಲಿಯೇ ಪುಟ್ಟಪ್ಪನವರು `ಜಲಗಾರ' ನಾಟಕವನ್ನು ರಚಿಸಿದರು. ಹಾಗೆಯೇ `ಯಮನಸೋಲು', `ಬೆರಳ್ಗೆ ಕೊರಳ್', `ಸ್ಮಶಾನ ಕುರುಕ್ಷೇತ್ರಂ' ಮೊದಲಾದ ನಾಟಕಗಳು ಒಂದರ ಹಿಂದೆ ಮತ್ತೊಂದು ಬರೆಯಲ್ಪಟ್ಟವು. ೧೯೨೮ರಲ್ಲಿ ಕಲ್ಬುರ್ಗಿಯಲ್ಲಿ ಜರುಗಿದ ೧೪ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪುಟ್ಟಪ್ಪನವರ `ಯಮನ ಸೋಲು' ನಾಟಕವನ್ನು ಅಭಿನಯಿಸಲಾಯಿತು. ಸತ್ಯವಾನನ ಪಾತ್ರಧಾರಿ ಗೈರುಹಾಜರಾಗಿದ್ದರಿಂದ ಸತ್ಯವಾನ್ ಪಾತ್ರವನ್ನು ನಿರ್ವಹಿಸುವ ಜವಾಬ್ದಾರಿಯು ಪುಟ್ಟಪ್ಪನವರದಾಯಿತು. ಜನರ ಮೆಚ್ಚುಗೆಯನ್ನು ಅವರು ಪಡೆದುಕೊಂಡರು. ೧೯೨೮ ಡಿಸೆಂಬರ್ ೧೫ ರಂದು ಬೆಂಗಳೂರು, ಸೆಂಟ್ರಲ್ ಕಾಲೇಜ್, ಕರ್ನಾಟಕ ಸಂಘದ ಆಶ್ರಯದಲ್ಲಿ ಎ.ಆರ್. ಕೃಷ್ಣಶಾಸ್ತ್ರಿಗಳು ವಿದ್ಯಾರ್ಥಿ ಕವಿ ಸಮ್ಮೇಳನವನ್ನು ವ್ಯವಸ್ಥೆಗೊಳಿಸಿದ್ದರು. ಅವರ ಒತ್ತಾಯದ ಮೇರೆಗೆ ವಿದ್ಯಾರ್ಥಿ ಕವಿ ಸಮ್ಮೇಳನದ ಅಧ್ಯಕ್ಷತೆಯನ್ನು ಪುಟ್ಟಪ್ಪನವರೇ ವಹಿಸಿಕೊಳ್ಳಬೇಕಾಯಿತು. ಮುಂದೆ `ಸಾಹಿತ್ಯ ಪ್ರಚಾರ' ಎಂಬ ಅವರ ವಿಮರ್ಶಾಕೃತಿಯಲ್ಲಿ ಈ ಕವಿಸಮ್ಮೇಳನದ ಅಧ್ಯಕ್ಷೀಯ ಭಾಷಣ ಪ್ರಕಟವಾಯಿತು.ಚಾರಿತ್ರಿಕವಾಗಿ ಸಾಂಸ್ಕೃತಿಕ ಮಹತ್ವವನ್ನು ಪಡೆದಿರುವ `ಕಿರಿಯ ಕಾಣಿಕೆ' (೧೯೨೮), `ತಳಿರು' (೧೯೩೦) ಎಂಬ ಕವನ ಸಂಕಲನಗಳು ಪ್ರಕಟವಾದದ್ದು ಇದೇ ಸಮಯದಲ್ಲಿ. ತೀ.ನಂ. ಶ್ರೀಕಂಠಯ್ಯ, ಎ.ಕೆ. ಪುಟ್ಟರಾಮು, ಎಲ್. ಗುಂಡಪ್ಪ, ಪು.ತಿ. ನರಸಿಂಹಾಚಾರ್, ಡಿ.ಎಲ್. ನರಸಿಂಹಾಚಾರ್ ಮತ್ತು ಪುಟ್ಟಪ್ಪನವರ ಕವಿತೆಗಳು ಈ ಸಂಕಲನಗಳಲ್ಲಿವೆ.

ಈ ಶತಮಾನದ ಅನನ್ಯ ಕೃತಿಯಂತಿರುವ ಪುಟ್ಟಪ್ಪನವರ `ಬೊಮ್ಮನಹಳ್ಳಿಯ ಕಿಂದರಿಜೋಗಿ' ಮೊದಲು ಪ್ರಕಟವಾದದ್ದು `ಕಿರಿಯ ಕಾಣಿಕೆ' ಸಂಕಲನದಲ್ಲಿಯೆ. ಈ ಕವನ ತಂದ ಜನಪ್ರಿಯತೆ ಪುಟ್ಟಪ್ಪನವರ ಹೆಸರನ್ನು ಮತ್ತಷ್ಟು ನಾಡಿನ ಜನತೆಗೆ ಪರಿಚಿತಗೊಳಿಸಿತು. ಇದೇ ಕಾಲಮಾನದಲ್ಲಿ `ನನ್ನ ಗೋಪಾಲ', `ಸಂನ್ಯಾಸಿ ಮತ್ತು ಇತರ ಕಥೆಗಳು' ಹಾಗೂ `ಮಲೆನಾಡಿನ ಚಿತ್ರಗಳು' ಪ್ರಬುದ್ಧ ಕರ್ಣಾಟಕ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಗೊಂಡವು. ೧೯೨೯ನೆಯ ವರ್ಷದಲ್ಲಿ ಎಂ.ಎ. ಪಾಸಾದನಂತರ ಪುಟ್ಟಪ್ಪನವರು ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿಕೊಂಡರು. ವಸಾಹತು ಸಂದರ್ಭದಲ್ಲಿ ಇಂಗ್ಲಿಷ್ ಭಾಷೆಯ ಮೇಲಾಟದಿಂದ ಶೋಚನೀಯ ಸ್ಥಿತಿಗಿಳಿದಿದ್ದ ಕನ್ನಡದ ಸ್ಥಾನಮಾನಗಳನ್ನು ಗೌರವಸ್ಥಾನಕ್ಕೆ ತಂದ ಕೀರ್ತಿ&ಟಿbsಠಿ;&ಟಿbsಠಿ; ಅಂದಿನ ಮಹತ್ವದ ಪ್ರತಿಭೆಗಳಾದ ಬಿ.ಎಂ. ಶ್ರೀಕಂಠಯ್ಯ, ಡಿ.ಎಲ್. ನರಸಿಂಹಾಚಾರ್ ಮತ್ತು ಕೆ.ವಿ. ಪುಟ್ಟಪ್ಪನವರಿಗೆ ಸಲ್ಲುತ್ತದೆ. ಈ ಎಲ್ಲ ಮಹನೀಯರ ಪಾಂಡಿತ್ಯ ಮತ್ತು ಪ್ರತಿಭೆಯಿಂದ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗೆಗೆ ಜನಸಾಮಾನ್ಯರಲ್ಲಿ ಗೌರವ ಮೂಡುವಂತಾಯಿತು.

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -