English Website

- ಜೀವನ ಚರಿತ್ರೆ - ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ರ ಭೇಟಿ -
ಪೀಠಿಕೆ

ಕುವೆಂಪು ಅವರ ಜನನ, ಬಾಲ್ಯ ಹಾಗೂ ಜೀವನ

ಅಕ್ಷರಾಭ್ಯಾಸ - ಶಾಲಾಜೀವನ

ಬಾಲ್ಯದ ಗುರುವಾದ ಒಂದು ಕವಿತೆ

ಮೈಸೂರಿನಲ್ಲಿ ವಿದ್ಯಾಭ್ಯಾಸ

ಮೊದಲ ಇಂಗ್ಲಿಷ್ ಕವನ

ವಸಾಹತು ಸಂದರ್ಭದಲ್ಲಿ ಕರ್ನಾಟಕ

ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ರ ಭೇಟಿ

ಕನ್ನಡದಲ್ಲಿ ಕವನ ರಚನೆ

ಕಲ್ಕತ್ತೆಗೆ ಪಯಣ

ಕೌಟುಂಬಿಕ ಜೀವನ

ಅಧ್ಯಾಪನ, ಸಾಹಿತ್ಯ ಸೃಷ್ಟಿ

೧೯೯೪ ರ ನಂತರದಲ್ಲಿ ಕವಿಮನೆ - ಕವಿಶೈಲ
 


[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿ೦ದ ಆಯ್ದ ಭಾಗ]

ಪುಟ್ಟಪ್ಪನವರು ಇಂಗ್ಲಿಷ್ ಕವಿಗಳನ್ನು ಅನುಕರಿಸಿ ಬರೆದ ಕವನಗಳು ಹಾಗೂ ಶಾಲಾವಾರ್ಷಿಕೋತ್ಸವದ ಸಂದರ್ಭಗಳಲ್ಲಿ ಮತ್ತು ಬೀಳ್ಕೊಡುಗೆ ಸಮಾರಂಭಗಳಲ್ಲಿ ಬರೆದ ಕವನಗಳನ್ನು ನೋಡಿದ ಸ್ನೇಹಿತರು, ಉಪಾಧ್ಯಾಯರು ಬೆನ್ನುತಟ್ಟಿದರು. ಆ ಪೋತ್ಸಾಹದಿಂದ ಉತ್ಸಾಹಿತನಾಗಿ ನಿರ್ದಿಷ್ಟ ಮಾರ್ಗದರ್ಶನಗಳಿಲ್ಲದ ಪರಭಾಷೆಯ ಸಾಹಿತ್ಯ ಸಂಪತ್ತಿಗೆ ಮಾರುಹೋದ ಪುಟ್ಟಪ್ಪನವರು ಇಂಗ್ಲಿಷ್ನಲ್ಲಿಯೇ ಕವನ ರಚನೆಯನ್ನು ಮುಂದುವರೆಸಿದರು. ಹಾಗೆ ಬರೆದ ಕವನಗಳನ್ನು ಮಿತ್ರರ ಪೋತ್ಸಾಹದೊಂದಿಗೆ ಅವರು ಎಸ್.ಎಸ್.ಎಲ್.ಸಿ. ತರಗತಿಯಲ್ಲಿ ಓದುತ್ತಿರುವಾಗಲೇ ೧೯೨೨ರಲ್ಲಿ (೧೮ನೆಯ ವಯಸ್ಸಿನಲ್ಲಿ) ``ಬಿಗಿನರ್ಸ್ ಮ್ಯೂಸ್'' ಎಂಬ ಹದಿನಾರು ಪುಟದ ಕವನ ಸಂಕಲನವನ್ನು ಪ್ರಕಟಿಸಿದರು.

`ಬಿಗಿನರ್ಸ್ ಮ್ಯೂಸ್' ಪ್ರಕಟವಾದ ನಂತರವೂ ಪುಟ್ಟಪ್ಪನವರ ಸಾಹಿತ್ಯ ಕೃಷಿ ಇಂಗ್ಲಿಷ್ನಲ್ಲಿಯೆ ಸಾಗಿತ್ತು. ಪುಟ್ಟಪ್ಪನವರೇ ಹೇಳುವಂತೆ ೧೯೨೪ನೆಯ ಜುಲೈ ೨ ನೆಯ ತಾರೀಖು ಬುಧವಾರದ ದಿನ ಪುಟ್ಟಪ್ಪನವರ ಜೀವನದಲ್ಲಿ, ಅದರಲ್ಲೂ ವಿಶೇಷವಾಗಿ, ಸಾಹಿತ್ಯ ಸಂಬಂಧವಾದ ಜೀವನದಲ್ಲಿ ಒಂದು ಸ್ಮರಣೀಯವಾದ ದಿನ. ಮಹಾರಾಜಾ ಹೈಸ್ಕೂಲಿನ ಇತಿಹಾಸದ ಅಧ್ಯಾಪಕರಾಗಿದ್ದ ಎಂ. ಹೆಚ್. ಕೃಷ್ಣ ಐಯ್ಯಂಗಾರ್ ಮತ್ತು ಆಗಿನ ವೈಸ್ಛಾನ್ಸ್ಲರ್ ಆಗಿದ್ದ ಬ್ರಜೇಂದ್ರನಾಥ ಶೀಲ್ ಅವರು ವಿಶೇಷ ಉಪನ್ಯಾಸಗಳನ್ನು ಕೊಡಲು ಬಂದಿದ್ದ ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ ಅವರ ವಿಚಾರವನ್ನು ತಿಳಿಸಿ, ಅವರನ್ನು ಕಂಡು ತಾವು ಬರೆದ ಕವನಗಳನ್ನು ಅವರಿಗೆ ತೋರಿಸುವಂತೆ ಹೇಳಿದರು.

ಮಾರನೆಯ ದಿನವೇ ಪುಟ್ಟಪ್ಪನವರು ಕಸಿನ್ಸ್ ಉಳಿದುಕೊಂಡಿದ್ದ ಅತಿಥಿಗೃಹಕ್ಕೆ ಹೋಗಿ, ತಮ್ಮ ಕೈಯಲ್ಲಿದ್ದ ಹಸ್ತಪ್ರತಿಯನ್ನು ಅವರಿಗೆ ಕೊಟ್ಟರು. ಕಸಿನ್ಸ್ ಪುಟ್ಟಪ್ಪನವರು ಕೊಟ್ಟ ಹಾಳೆಗಳನ್ನು ತಿರುವಿ ನೋಡಿದರು. ಮತ್ತೆ ತಲೆಯೆತ್ತಿ, ಸ್ವದೇಶೀ ಚಳವಳಿಯ ಪರಿಣಾಮವಾಗಿ ಖಾದಿ ತೊಟ್ಟು ಎದುರಿಗೆ ನಿಂತಿದ್ದ ಪುಟ್ಟಪ್ಪನವರನ್ನು ಆಪಾದಮಸ್ತಕ ನೋಡಿದರು. ಆಗ ಅವರಲ್ಲಿ ಏನು ಸಂಭಾಷಣೆ ನಡೆಯಿತೆಂಬುದನ್ನು ಪುಟ್ಟಪ್ಪನವರ ಈ ಮಾತುಗಳಿಂದ ತಿಳಿಯಬಹುದು.

``ಕಸಿನ್ಸ್ ಸ್ವಲ್ಪ ಅಸಮಾಧಾನದ ಧ್ವನಿಯಿಂದಲೆ ಮಾತನಾಡಿದರು: ಏನಿದೆಲ್ಲ ಕಗ್ಗ ? (What is all this stuff?

ನಿಮ್ಮ ಮೈಮೇಲೆ ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶೀ ವಸ್ತುಗಳೆ ಕಾಣುತ್ತವೆ. ಇದು ಮಾತ್ರ ಸ್ವದೇಶಿಯಲ್ಲ. ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?''

``ಅವರ ಆ ಧ್ವನಿಗೂ ಭಂಗಿಗೂ ನನಗಾಗಲೆ ಮುನಿಸು ಬರತೊಡಗಿತ್ತು. ನನ್ನ ಇಂಗ್ಲಿಷ್ ಕವನಗಳನ್ನು ನೋಡಿ, ಇತರ ನನ್ನ ಭಾರತೀಯ ಮಿತ್ರರೂ ಅಧ್ಯಾಪಕರೂ ಶ್ಲಾಘಿಸಿದ್ದಂತೆ, ಅವರೂ ಅವುಗಳನ್ನು ಮೆಚ್ಚಿ ಹೊಗಳುತ್ತಾರೆ ಎಂದು ಆಸೆಪಟ್ಟಿದ್ದ ನನಗೆ ತುಂಬಾ ತೇಜೋವಧೆಯಾದಂತಾಗಿ ನಿರಾಶೆಯಾಯಿತು. ನಾನು ಕನ್ನಡದಲ್ಲಿ ಆಗಲೆ `ಅಮಲನ ಕಥೆ'ಯನ್ನು ಮತ್ತು ಇತರ ಒಂದೆರಡು ಕವನ ಬರೆಯುವ ಪ್ರಯತ್ನವನ್ನೂ ಮಾಡಿದ್ದೆನಾದರೂ ಅವರ ಪ್ರಶ್ನೆಗೆ ಮರೆತವನಂತೆ ಉತ್ತರಿಸಿದೆ: ``ಇಲ್ಲ. ಕನ್ನಡದಲ್ಲಿ, ಇಂಗ್ಲಿಷಿನಲ್ಲಿ ಸಾಧ್ಯವಾಗುವಂತೆ, ಉದಾತ್ತ ಭಾವಗಳನ್ನು ಉನ್ನತ ಆಲೋಚನೆಗಳನ್ನು ಹೇಳಲು ಸಾಧ್ಯವಾಗುವುದಿಲ್ಲ. ಆ ಭಾಷೆಯ ಮಟ್ಟ ಬಹಳ ಕೀಳು. ಅಲ್ಲದೆ ಅದರಲ್ಲಿರುವ ಛಂದಸ್ಸು ಹಳೆಯ ಕಂದಾಚಾರದ ಛಂದಸ್ಸು, ವೃತ್ತ, ಕಂದ ಇತ್ಯಾದಿ. ಇಂಗ್ಲಿಷಿನಲ್ಲಿರುವ ಛಂದೋ ವೈವಿಧ್ಯ ಇಲ್ಲವೆ ಇಲ್ಲ.''

``ಈಗ ನನಗೆ ಅತ್ಯಂತ ಅವಿವೇಕವಾಗಿಯೂ ಹಾಸ್ಯಾಸ್ಪದವಾಗಿಯೂ ಧೂರ್ತವಾಗಿಯೂ ತೋರುವ ನನ್ನ ಆ ಉತ್ತರವನ್ನು ಆಲಿಸಿ ಪರಿಣತ ಮನಸ್ಸಿನವರೂ ಅನುಭವಶಾಲಿಯೂ ಆಗಿದ್ದ ಅವರು ಸೌಮ್ಯ ಸಾಂತ್ವನಕರ ಧ್ವನಿಯಿಂದ ಹೇಳಿದರು: ``ಹಾಗಲ್ಲ ಯಾವ ಭಾಷೆಯೂ ತನಗೆ ತಾನೆ ಅಸಮರ್ಥವಲ್ಲ. ಸಮರ್ಥನೊಬ್ಬನು ಬರುವತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು, ಅಸಮರ್ಥರಿಗೆ. ಸಮರ್ಥನು ಬಂದೊಡನೆ ಅವನ ಕೈಯಲ್ಲಿ ಅದು ಎಂತಹ ಅದ್ಭುತವನ್ನಾದರೂ ಸಾಧಿಸಬಲ್ಲದು. ಈಗ ನೋಡಿ. ಬಂಗಾಳಿ ಭಾಷೆ ನೀವು ನಿಮ್ಮ ಭಾಷೆಯನ್ನು ಕುರಿತು ಹೇಳಿದಂತೆಯೇ ಅದೂ ಇತ್ತು. ರವೀಂದ್ರನಾಥ ಠಾಗೂರರು ಬಂದರು. ಹೊಸ ಹೊಸ ರೀತಿಯಲ್ಲಿ ಬರೆದರು. ಹೊಸ ಛಂದಸ್ಸುಗಳನ್ನು ಕಂಡುಹಿಡಿದರು. ಅವರಿಗೆ ನೊಬೆಲ್ ಬಹುಮಾನವೂ ಬಂದಿತು! ಹಾಗೆಯೆ ನೀವು ಹೊಸ ಹೊಸ ಛಂದಸ್ಸುಗಳನ್ನು ಕಂಡುಹಿಡಿದು, ಹೊಸ ಹೊಸ ಪದಗಳನ್ನು ಪದಪ್ರಯೋಗಗಳನ್ನು ಸಾಧಿಸಿ, ಹೊಸ ರೀತಿಯ ಸಾಹಿತ್ಯ ಸೃಷ್ಟಿಮಾಡಬೇಕು. ನೀವು ಸೃಷ್ಟಿಸುವ ಸಾಹಿತ್ಯ ಶ್ರೇಷ್ಠವೆಂದು ತೋರಿ ಬಂದರೆ ನಾವು ಅದನ್ನು ಇಂಗ್ಲಿಷಿಗೆ ಭಾಷಾಂತರಿಸಿಕೊಳ್ಳುತ್ತೇವೆ, ರವೀಂದ್ರರ ಸಾಹಿತ್ಯ ಇಂಗ್ಲಿಷಿಗೆ ಭಾಷಾಂತರವಾಗಿರುವಂತೆ. ನೀವು ಇಂಗ್ಲಿಷಿನಲ್ಲಿ ಸೃಜನ ಸಾಹಿತ್ಯ ಸೃಷ್ಟಿ ಮಾಡಲಾರಿರಿ. ಅದು ನಿಮಗೆ ಪರಭಾಷೆ. ಹುಟ್ಟಿನೊಡನೆ ಬಂದ ಭಾಷೆಯಲ್ಲಿ ಮಾತ್ರ ಉತ್ತಮ ಸೃಜನ ಸಾಹಿತ್ಯ ಸೃಷ್ಟಿಯಾಗಬಲ್ಲದು. ಅದರಲ್ಲಿಯೂ ಕವಿತೆಯಲ್ಲಂತೂ ಉತ್ತಮ ಸೃಜನ ಸಾಹಿತ್ಯ ಯಾರಿಗೂ ಪರಭಾಷೆಯಲ್ಲಿ ಸಾಧ್ಯವಿಲ್ಲ. ಅದು ನಿಮಗೆ ಗೊತ್ತಾಗುವುದೂ ಇಲ್ಲ. ಅದನ್ನು ಓದುವ ನಮಗೆ ಗೊತ್ತಾಗುತ್ತದೆ, ಅದೆಂತಹ ನಗೆಪಾಟಲ ಸೃಷ್ಟಿ ಎಂಬುದು.''

ಇನ್ನೂ ಕೆಲವು ವಿವೇಕದ ಮಾತುಗಳನ್ನಾಡಿ ಹಸ್ತಪ್ರತಿಯನ್ನು ನನಗೆ ವಾಪಸ್ಸು ಕೊಟ್ಟು ಬೀಳ್ಕೊಂಡರು. ನಾನು ಖಿನ್ನವಾಗಿ ಅತೃಪ್ತಿ ಮತ್ತು ಕುಪಿತ ಚಿತ್ತಭಂಗಿಯಲ್ಲಿ ಹೊರಗೆ ಬಂದೆ.

ಹೊರಗಡೆ ಕುಳಿತಿದ್ದ ಮಿತ್ರರಿಗೆ ನನಗಾದ ತೇಜೋವಧೆ ಎಂದು ನಾನು ತಿಳಿದುಕೊಂಡಿದ್ದ ಸಂಗತಿಯನ್ನು ಹೊರಗೆಡಹದೆ ಮುಚ್ಚಿಕೊಂಡೆ. ಕಸಿನ್ಸ್ ಅವರು ಸ್ವದೇಶೀ ಚಳವಳಿಗಾರರಾಗಿರುವುದರಿಂದ ನನ್ನ ಸ್ವದೇಶೀ ಭಾಷೆಯಾದ ಕನ್ನಡದಲ್ಲಿಯೆ ನಾನು ಬರೆದರೆ ಉತ್ತಮ ಮತ್ತು ದೇಶಭಕ್ತಿದ್ಯೋತಕ ಎಂದು ಬೋಧಿಸಿದರೆಂದು ವ್ಯಂಗ್ಯವಾಗಿ ಟೀಕಿಸಿದೆ.

ಆದರೆ ಕಸಿನ್ಸ್ ಅವರ ಹಿತವಚನ ಮೇಲೆ ಮೇಲಕ್ಕೆ ತಿರಸ್ಕೃತವಾಗಿದ್ದರು ಸುದೈವದಿಂದ ನನ್ನ ಅಂತಃಪ್ರಜ್ಞೆ ಅದನ್ನು ಒಪ್ಪಿಕೊಂಡಿತ್ತೆಂದು ತೋರುತ್ತದೆ. ಕನ್ನಡ ವಾಗ್ದೇವಿಯ ಕೃಪೆಯೂ ಆ ಸುಸಂಧಿಯನ್ನು ಉಪಯೋಗಿಸಿಕೊಂಡು ತನ್ನ ಕಂದನನ್ನು ತನ್ನ ಹಾಲೆದೆಗೆ ಎಳೆದುಕೊಂಡಳು!''

ಅಂದಿನಿಂದ ಕನ್ನಡದಲ್ಲಿ ಕಾವ್ಯ ರಚಿಸುವ ಸಂಕಲ್ಪ ಪುಟ್ಟಪ್ಪನವರದಾಯಿತು. ಅವರೇ ಹೇಳುವಂತೆ `ಇದೊಂದು ಐತಿಹಾಸಿಕ ಘಟನೆ'.

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -