English Website

- ಜೀವನ ಚರಿತ್ರೆ - ವಸಾಹತು ಸಂದರ್ಭದಲ್ಲಿ ಕರ್ನಾಟಕ -
ಪೀಠಿಕೆ

ಕುವೆಂಪು ಅವರ ಜನನ, ಬಾಲ್ಯ ಹಾಗೂ ಜೀವನ

ಅಕ್ಷರಾಭ್ಯಾಸ - ಶಾಲಾಜೀವನ

ಬಾಲ್ಯದ ಗುರುವಾದ ಒಂದು ಕವಿತೆ

ಮೈಸೂರಿನಲ್ಲಿ ವಿದ್ಯಾಭ್ಯಾಸ

ಮೊದಲ ಇಂಗ್ಲಿಷ್ ಕವನ

ವಸಾಹತು ಸಂದರ್ಭದಲ್ಲಿ ಕರ್ನಾಟಕ

ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ರ ಭೇಟಿ

ಕನ್ನಡದಲ್ಲಿ ಕವನ ರಚನೆ

ಕಲ್ಕತ್ತೆಗೆ ಪಯಣ

ಕೌಟುಂಬಿಕ ಜೀವನ

ಅಧ್ಯಾಪನ, ಸಾಹಿತ್ಯ ಸೃಷ್ಟಿ

೧೯೯೪ ರ ನಂತರದಲ್ಲಿ ಕವಿಮನೆ - ಕವಿಶೈಲ
 


[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿ೦ದ ಆಯ್ದ ಭಾಗ]

ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮಿಸಿ, ಇಲ್ಲಿನ ರಾಜಕೀಯ ಮತ್ತು ಸಾಮಾಜಿಕ ಜೀವನರಂಗಕ್ಕೆ ಮಹಾತ್ಮಗಾಂಧೀಜಿ ಪ್ರವೇಶಿಸಿದಂದಿನಿಂದ ಸಮಗ್ರರಾಷ್ಟ್ರದ ಜನಜೀವನದಲ್ಲಿ ಒಂದು ನವೋತ್ಥಾನದ ಯುಗ ಪ್ರಾರಂಭವಾಯಿತು. ಆ ಸಮುದ್ರ ಮಂಥನದ ಕೇಂದ್ರವಿದ್ದುದು ಬ್ರಿಟಿಷ್ ಇಂಡಿಯಾದಲ್ಲಿ. ಆದರೂ ಅದರ ಪರಿಣಾಮ ದೇಶೀ ಸಂಸ್ಥಾನಗಳನ್ನು ಅಪ್ಪಳಿಸದೆ ಬಿಡಲಿಲ್ಲ. ಹೊಸ ಹೊಸ ಭಾವತರಂಗಗಳಿಗೆ ಎದೆ ತೆರೆದಿರುತ್ತಿದ್ದ ವಿದ್ಯಾರ್ಥಿವೃಂದವು ಅಂಥ ಅನೇಕ ಪ್ರಭಾವಗಳಿಗೆ ಒಳಗಾಯಿತು. ಪುಟ್ಟಪ್ಪನವರ ಕವಿಚೇತನವಂತೂ ತನ್ನ ಸಮಸ್ತ ಗವಾಕ್ಷಗಳನ್ನು ತೆರೆದು ಪ್ರಾಚ್ಯ ಮತ್ತು ಪಾಶ್ಚಾತ್ಯ ಶಕ್ತಿದೇವತೆಗಳನ್ನು ಆಹ್ವಾನಿಸಿತು. ಕುತೂಹಲವೆಂದರೆ ಪುಟ್ಟಪ್ಪನವರ ಸಾಹಿತ್ಯ ಕೃಷಿಯ ಅಭಿವ್ಯಕ್ತಿಯ ಮಾಧ್ಯಮ ಮೊದಲು ಪ್ರಕಟವಾಗಿದ್ದು ತನ್ನ ತಾಯಿನುಡಿಯಲ್ಲಲ್ಲ. ಅದು ಮೊದಲು ಮೈದೋರಿದ್ದು ವಿದೇಶಿಯದಾದ ಇಂಗ್ಲಿಷ್ನಲ್ಲಿ. ಯಾವ ಬ್ರಿಟಿಷರನ್ನು ಹೊಡೆದೋಡಿಸಲು ಭರತಖಂಡ ಪ್ರಚಂಡ ಚಳುವಳಿ ಹೂಡಿತ್ತೋ ಆ ಬ್ರಿಟಿಷರ ಭಾಷೆಯಾದ ಇಂಗ್ಲಿಷಿನಲ್ಲಿ!

``ಇಂಡಿಯಾ ದೇಶವನ್ನು ಶೋಷಣೆ ಮಾಡಿ ದಬ್ಬಾಳಿಕೆ ನಡೆಸುತ್ತಿದ್ದ ಇಂಗ್ಲಿಷರ ಮೇಲೆ ನನಗೆ ಎಷ್ಟು ದ್ವೇಷವಿದ್ದಿತೊ ಅದಕ್ಕೆ ದ್ವಿಗುಣಿತ ತ್ರಿಗುಣಿತವಾಗಿ ಇಂಗ್ಲಿಷ್ ಭಾಷೆಯ ಮೇಲೆ ನನಗೆ ಗೌರವ ಮಮತೆಗಳಿದ್ದುವು. ಮೊದಲನೆಯದಾಗಿ, ಇಂಗ್ಲಿಷ್ ಸಾಹಿತ್ಯಕ್ಕೆ ನಾನು ಮಾರುಹೋಗಿದ್ದೆ; ವಿಶೇಷವಾಗಿ ಇಂಗ್ಲಿಷ್ ಕವಿಗಳಿಗೆ ಇಂಗ್ಲಿಷ್ ಕವಿಗಳು ನಮ್ಮ ಕವಿಗಳಿಗಿಂತಲೂ ಮೇಲಾಗಿದ್ದರು ಎಂಬ ಕಾರಣಕ್ಕಿಂತಲೂ ಮಿಗಿಲಾಗಿ ಇಂಗ್ಲಿಷ್ ಕವನಗಳನ್ನು ಪಾಠ ಹೇಳುತ್ತಿದ್ದ ರೀತಿಯೆ ನನಗೆ ಆಕರ್ಷಕವಾಗಿತ್ತು. ಜೊತೆಗೆ ಇಂಗ್ಲಿಷ್ ಕವನಗಳ ವಿಷಯದ ನೂತನೆಯೂ, ಅವುಗಳ ಭಾವಗೀತಾತ್ಮಕತೆಯೂ, ಇಂಗ್ಲಿಷ್ ಕವಿಗಳ ವ್ಯಕ್ತಿನಿಷ್ಠವಾದ ರಸಾನುಭವಗಳ ರಮಣೀಯತೆಯೂ ನಮ್ಮ ಕವಿಗಳ ಬರಿಯ ಪೌರಾಣಿಕವಾದ ಕಥನಾತ್ಮಕತೆಗಿಂತ ಹೆಚ್ಚು ಮನಮೋಹಕವಾಗಿತ್ತು. ಎರಡನೆಯದಾಗಿ, ನನ್ನ ಜ್ಞಾನತೃಷ್ಣೆ ತನ್ನ ದಾಹಪರಿಹಾರಕ್ಕಾಗಿ ರಸನಾ ಪ್ರಚಾರ ಮಾಡಿ ಅಮೃತವಾರಿಯನ್ನು ಅನ್ವೇಷಿಸುತ್ತಿದ್ದಾಗ ಕನ್ನಡ ವಾಙ್ಮಯ ಮರುಭೂಮಿಯಾಗಿತ್ತೆಂದೇ ಹೇಳಬೇಕು. ನನ್ನ ಭಾಗಕ್ಕಾದರೂ ! ನನಗೆ ಚಿಕ್ಕಂದಿನಿಂದಲೂ ಸಹಜವಾಗಿದ್ದ ಆಧ್ಯಾತ್ಮಿಕ ಆಸಕ್ತಿಗೆ ಮತ್ತು ವಿಚಾರಾತ್ಮಕವಾದ ಜಿಜ್ಞಾಸೆಗೆ ಮೊತ್ತಮೊದಲು ಆಹಾರ ಒದಗಿದುದು ಆಂಗ್ಲೇಯ ಭಾಷೆಯ ಮುಖಾಂತರವೆ. ವಸ್ತು ಭಾರತೀಯವಾದದ್ದೆ ಆದರೂ ಅದನ್ನು ನಾನು ಇಂಗ್ಲಿಷಿನ ಮುಖಾಂತರವೆ ಪಡೆಯಲು ಸಾಧ್ಯವಾಗಿತ್ತು. ಪ್ರಚಲಿತ ವೈದಿಕ ಹಿಂದೂಧರ್ಮದ ಅನೇಕ ಶ್ರದ್ಧೆ ಆಚಾರ ವಿಚಾರಗಳಲ್ಲಿ ನನಗೆ ನಂಬುಗೆ ಇರಲಿಲ್ಲ ಮಾತ್ರವಲ್ಲ, ಅತ್ಯಂತ ತಿರಸ್ಕಾರವೂ ಇತ್ತು. ಮೇಲು ಕೀಳು ಭಾವನೆಗಳು, ಜಾತಿಪದ್ಧತಿ, ಬ್ರಾಹ್ಮಣನೆ ಬ್ರಹ್ಮದ ಬಾಯಿಂದ ಬಂದಿರುವ ಶ್ರೇಷ್ಠ ವಸ್ತು. ಶೂದ್ರನು ಸಂಸ್ಕೃತ ಓದಬಾರದು ಮತ್ತು ಅದನ್ನು ಯಾರಾದರೂ ಉಚ್ಚರಿಸುವುದನ್ನು ಅವನು ಆಲಿಸಿದರೆ ಅವನ ಕಿವಿಗೆ ಸೀಸ ಕಾಯಿಸಿ ಹೊಯ್ಯಬೇಕು ಎಂಬಂತಹ ಮನುವಿನಂತಹ ಶಾಸ್ತ್ರಾಜ್ಞೆ - ಇತ್ಯಾದಿ ಒಂದಲ್ಲ ಎರಡಲ್ಲ ಸಾವಿರಾರು ಪ್ರಚಲಿತ ಹಿಂದೂ ಧರ್ಮದ ಅನುದಾನವೂ ಅವಿವೇಕವೂ ಆದ ನೀಚಭಾವನೆಗಳಲ್ಲಿ ನನಗೆ ಬದ್ಧ ದ್ವೇಷವಿತ್ತು. ಅಂತಹ ದುರ್ಭಾವನೆಗಳಿಗೆಲ್ಲ ಕುಠಾರ ಸ್ವರೂಪವಾಗಿದ್ದ ಸ್ವಾಮಿ ವಿವೇಕಾನಂದರಂತಹ ವಾಣಿ ನನಗೆ ದೊರೆತದ್ದು ಇಂಗ್ಲಿಷ್ ಭಾಷೆಯ ಮೂಲಕವೆ. ನನ್ನ ಜೀವನಕ್ಕೆ ಅಭಯ ಘೋಷಣೆ ಮಾಡಿ, ತಾನು ಶಿವತತ್ತ್ವದಿಂದ ಅಭಿನ್ನ ಎಂಬುದನ್ನೂ ಸಾರಿ, ಆತ್ಮದ ಔನ್ನತ್ಯ ನೈರ್ಮಲ್ಯ ಗೌರವಗಳನ್ನು ಮನಮುಟ್ಟುವಂತೆಯೂ ಎದೆವೊಗುವಂತೆಯೂ ಹಾಡಿದ ಪ್ರಾಚೀನ ಮಹರ್ಷಿಗಳ ವೇದಾಂತವಾಣಿ ನನ್ನ ಪ್ರಜ್ಞೆಗೆ ಪ್ರವೇಶಿಸಲು ಸಾಧ್ಯವಾದುದು ಇಂಗ್ಲಿಷ್ ಭಾಷಾ ಕಲಿಕೆಯಿಂದಲೆ! ಮೂರನೆಯದಾಗಿ ಇಂಡಿಯಾದೇಶವನ್ನು ಗೆದ್ದು ಅದರ ರಾಜಕೀಯ ಅವ್ಯವಸ್ಥೆಗೆ ಒಂದು ಸುವ್ಯವಸ್ಥೆಯನ್ನು ತಂದುಕೊಟ್ಟು, ಬ್ರಾಹ್ಮಣಾದಿ ಉಚ್ಛವರ್ಣದವರಿಂದ ಸಾವಿರಾರು ವರ್ಷಗಳಿಂದ ತುಳಿಯಲ್ಪಟ್ಟು ಶೋಷಿಸಲ್ಪಟ್ಟು ದಾಸ್ಯತ್ವವನ್ನೆ ದೈವದತ್ತವೆಂದೂ ವಿಧಿಯೆಂದೂ ಒಪ್ಪಿಕೊಂಡು ಕಾಲಡಿಯ ಕಸವಾಗಿ ಬಿದ್ದಿದ್ದ ಶೂದ್ರಾದಿ ವರ್ಗದವರನ್ನು ತಲೆಯೆತ್ತುವಂತೆ ಪ್ರೇರೇಪಿಸಿದ್ದೂ ಇಂಗ್ಲಿಷರೆ ಮತ್ತು ಇಂಗ್ಲಿಷ್ ಭಾಷೆ ಸಾಹಿತ್ಯ ಚರಿತ್ರೆ ಮೊದಲಾದವುಗಳನ್ನೋದಿ, ಅವರ ಸಂಸ್ಕೃತಿಯಿಂದ ಪ್ರಭಾವಿತರಾಗಿದ್ದ ಭಾರತೀಯರೆ! ಇಂಗ್ಲಿಷ್ ಆಳುವವರ ಅಧಿಕೃತ ಭಾಷೆಯಾಗಿ ಸಮಸ್ತ ಭರತಖಂಡವನ್ನೂ ಮೊತ್ತಮೊದಲಿಗೆಂಬಂತೆ ಏಕತ್ವದಲ್ಲಿ ಬಿಗಿದು, ನಮ್ಮಲ್ಲಿ ಧಾರ್ಮಿಕ ಭೂಮಿಕೆಯಲ್ಲಿ ಮಾತ್ರವೆ ಇದ್ದ ಅಖಿಲಭಾರತೀಯತ್ವವು ರಾಜಕೀಯಾದಿ ಭೂಮಿಕೆಗಳಲ್ಲಿಯೂ ನಿಷ್ಠಿತವಾಗುವಂತೆ ಕೃಪೆಗೈದಿತ್ತು. ಶೇಕಡ ಅರ್ಧವೊ ಕಾಲೋ ಜನಕ್ಕೆ ಮಾತ್ರ ಆ ಭಾಷೆ ತಿಳಿದಿದ್ದರೂ ಅದಕ್ಕೆ ಅಖಿಲ ಭಾರತೀಯ ವ್ಯಾಪ್ತಿ ಪ್ರಾಪ್ತವಾಯಿತು. ಎಲ್ಲರ ಗೌರವಕ್ಕೂ ಭಾಜನವಾಯಿತು. ಇಂಗ್ಲಿಷ್ ಜನವೆಂತೊ ಅಂತೆ ಇಂಗ್ಲಿಷ್ ಮಾತನಾಡುವವರೂ ``ಪೂಜ್ಯ''ರಾಗಿಬಿಟ್ಟರು. ``ದೊರೆ''ಗಳಾದರು, ``ಸಾಹೇಬರೂ'' ಆದರು. ಆ ಕಾರಣದಿಂದಲೂ ಆ ಭಾಷೆ ನನ್ನಂತಹ ಎಳೆಯರ ಮೇಲೆ ತನ್ನ ಪ್ರಭುತ್ವಾಧಿಕಾರ ಸ್ಥಾಪಿಸಿ, ಪೂಜ್ಯಸ್ಥಾನವನ್ನೂ ಗಿಟ್ಟಿಸಿಕೊಂಡುಬಿಟ್ಟಿತು!'' ಎಂದು ಕುವೆಂಪು ಅವರು ವಸಾಹತು ಸಂದರ್ಭದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಪರಿಸರವನ್ನು ಪರಿಚಯಿಸುತ್ತಾರೆ.

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -