English Website

- ಜೀವನ ಚರಿತ್ರೆ - ಬಾಲ್ಯದ ಗುರುವಾದ ಒಂದು ಕವಿತೆ -
ಪೀಠಿಕೆ

ಕುವೆಂಪು ಅವರ ಜನನ, ಬಾಲ್ಯ ಹಾಗೂ ಜೀವನ

ಅಕ್ಷರಾಭ್ಯಾಸ - ಶಾಲಾಜೀವನ

ಬಾಲ್ಯದ ಗುರುವಾದ ಒಂದು ಕವಿತೆ

ಮೈಸೂರಿನಲ್ಲಿ ವಿದ್ಯಾಭ್ಯಾಸ

ಮೊದಲ ಇಂಗ್ಲಿಷ್ ಕವನ

ವಸಾಹತು ಸಂದರ್ಭದಲ್ಲಿ ಕರ್ನಾಟಕ

ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ರ ಭೇಟಿ

ಕನ್ನಡದಲ್ಲಿ ಕವನ ರಚನೆ

ಕಲ್ಕತ್ತೆಗೆ ಪಯಣ

ಕೌಟುಂಬಿಕ ಜೀವನ

ಅಧ್ಯಾಪನ, ಸಾಹಿತ್ಯ ಸೃಷ್ಟಿ

೧೯೯೪ ರ ನಂತರದಲ್ಲಿ ಕವಿಮನೆ - ಕವಿಶೈಲ
 


[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿ೦ದ ಆಯ್ದ ಭಾಗ]

ಪುಟ್ಟಪ್ಪನವರ ಪ್ರತಿಭೆಯನ್ನು ಗಮನಿಸಿದ್ದ ಮಂಜಪ್ಪಗೌಡರಿಂದಲೇ ಪರಿಚಿತವಾದ `ಲಾಂಗ್ಫೆಲೋ' ಕವಿಯ `ದಿ ಸಾಮ್ ಆಫ್ ಲೈಫ್(The Sam Of Life) ಮುಂದೆ ಅವರ ಬದುಕಿನ ರೂಪುರೇಷೆಯನ್ನು ರೂಪಿಸಿಕೊಳ್ಳುವಲ್ಲಿ ಅತ್ಯಂತ ಪ್ರಭಾವಶಾಲಿಯಾದ ಕವಿತೆಯಾಯಿತು.

``ಜಗತ್ತು ಮತ್ತು ಜೀವನ ಬರಿಯ ಒಂದು ಶೂನ್ಯ ಸ್ವಪ್ನವಲ್ಲ. ಹಾಗೆಂದುಕೊಂಡು ನಿದ್ರಿಸುವ ಜೀವ ಸತ್ತಂತೆ ಸರಿ ! ಬದುಕು ಮಿಥ್ಯೆಯಲ್ಲ; ಬದುಕು ಸದೃಢ ಸತ್ಯ. ಪಂಚಭೂತಗಳಿಂದ ಹುಟ್ಟಿ ಬಂದ ನೀನು ಪಂಚಭೂತಗಳಲ್ಲಿ ಸೇರಿ ಹೋಗುತ್ತೀಯೆ ಎಂಬುದು ಆತ್ಮಕ್ಕಲ್ಲ; ಆ ಮಾತು ಅನ್ವಯವಾಗುವುದು ದೇಹಕ್ಕೆ. ನಮ್ಮ ದಾರಿ, ನಮ್ಮ ಗುರಿ, ಸುಖಕ್ಕೂ ಅಲ್ಲ, ದುಃಖಕ್ಕೂ ಅಲ್ಲ, ಕರ್ಮಕ್ಕೆ ; ಕರ್ಮ ಮಾಡುವುದೆ ನಮ್ಮ ಕರ್ತವ್ಯ. ಇಂದಿಗಿಂತ ನಾಳೆ, ಒಂದೊಂದು ದಿನಕ್ಕೂ ನಮ್ಮ ದಾರಿ ಮುಂದು ಮುಂದಕ್ಕೆ ಸಾಗುತ್ತಿರಬೇಕು. ವಿದ್ಯೆ, ಕಲೆ, ಜ್ಞಾನ ಇವು ಅನಂತ, ಅಪಾರ. ನಮ್ಮ ಆಯುಸ್ಸಾದರೊ ಕ್ಷಣಿಕವೆಂಬಂತೆ ಮಿಂಚಿ ಹರಿಯುತ್ತಿದೆ. ಯಾವತ್ತಾದರೂ ಮೃತ್ಯುವಿನ ಕರೆ ಬರಬಹುದು ನಮಗೆ. ಆದ್ದರಿಂದ ಬದುಕಿನ ಕದನ ರಂಗದಲ್ಲಿ, ಮೂಕಪ್ರಾಣಿಗಳಂತಲ್ಲದೆ, ವೀರರಂತೆ ಹೋರಾಡುತ್ತಾ ಮುನ್ನುಗ್ಗಬೇಕು. ಭವಿಷ್ಯತ್ತಿನ ಸುಖಸ್ವಪ್ನ ನಂಬಿ ಕುಳಿತಿರಬಾರದು; ಹಾಗೆಯೆ ಕಳೆದ ಕಾಲದ ವೈಭವವನ್ನೆ ಮೆಲುಕು ಹಾಕುತ್ತಲೂ ಇರಬಾರದು; ಹಿಂದಕ್ಕೂ ನೋಡದೆ, ಮುಂದಕ್ಕೂ ಹಾರದೆ, ಇಂದಿನದನ್ನು ಇಂದೆಯೆ ಮಾಡಿ ಪೂರೈಸಬೇಕು, ಹೃದಯದ ಧೈರ್ಯೋತ್ಸಾಹ ಕೆಡದೆ, ಭಗವಂತನಲ್ಲಿ ಶ್ರದ್ಧೆಯಿಟ್ಟು, ಇದಕ್ಕೆಲ್ಲ ನಮಗೆ ಮಾರ್ಗದರ್ಶಿಗಳಾಗಿದ್ದಾರೆ ಜಗತ್ತಿನ ಮಹಾಪುರುಷರು. ಅವರನ್ನು ಅನುಸರಿಸಿ ಅವರ ಹೆಜ್ಜೆಯ ಮೇಲೆ ಹೆಜ್ಜೆಯಿಟ್ಟು ನಡೆದರೆ ನಮ್ಮ ಬದುಕು ಭವ್ಯವಾಗುತ್ತದೆ. ಅಳಿದ ಮೇಲೆ ನಾವೂ ಅವರಂತೆಯೇ ಕಾಲದ ಹೊಳೆಯ ಮರಳು ದಿಣ್ಣೆಯ ಮೇಲೆ ನಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಬಹುದು. ಬಹುಶಃ ನಮ್ಮ ತರುವಾಯ ನಮ್ಮ ಹಿಂದೆ ಸಂಸಾರ ಮಹಾಸಾಗರದಲ್ಲಿ ತೇಲುತ್ತಾ ಬರುವ ಯಾವನಾದರೊಬ್ಬ ಹಡಗೊಡೆದು ದಿಕ್ಕುಗೆಟ್ಟು ಬರುವ ಜೀವನಪ್ರಯಾಣಿಕನು ಆ ನಮ್ಮ ಹೆಜ್ಜೆಗುರುತುಗಳನ್ನು ಕಂಡು ಧೈರ್ಯತಂದುಕೊಂಡು ಮುಂಬರಿಯಬಹುದು. ಆದ್ದರಿಂದ ಎದ್ದೇಳು! ಕರ್ಮನಿರತನಾಗು! ಬಂದದ್ದೆಲ್ಲಾ ಬರಲಿ! ಹೋಗುತ್ತಾ ಜಯಿಸುತ್ತಾ ಮುಂದುವರಿ ! ಕರ್ಮ ಮಾಡುತ್ತಾ ತಾಳ್ಮೆಗೆಡದೆ ಕಾಯುವುದನ್ನು ಕಲಿ!''

ಪುಟ್ಟಪ್ಪನವರೇ ಹೇಳುವಂತೆ, ಬಾಲ್ಯದ ಗುರುವಾಗಿ, ತನ್ನ ಚೇತನಕ್ಕೆ ಕಣ್ದೆರೆಯಿಸಿದ ಈ ಕವನ ಅವರ ಪ್ರಪ್ರಥಮ ದೀಕ್ಷಾ ಗುರುವಾದದ್ದು ಐತಿಹಾಸಿಕವಾಗಿ ಮಹತ್ವವನ್ನು ಪಡೆದುಕೊಳ್ಳುತ್ತದೆ. ಹೊಸ ಎಚ್ಚರವನ್ನೇ ಈ ಕವಿತೆ ಅವರಲ್ಲುಂಟುಮಾಡಿತೆಂಬುದನ್ನು ಮೇಲಿನ ಕವನದ ಸಂಗ್ರಹ ರೂಪದ ಬರಹದಲ್ಲಿ ಕಾಣುತ್ತೇವೆ.

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -