English Website

- ಜೀವನ ಚರಿತ್ರೆ - ಅಕ್ಷರಾಭ್ಯಾಸ - ಶಾಲಾಜೀವನ -
ಪೀಠಿಕೆ

ಕುವೆಂಪು ಅವರ ಜನನ, ಬಾಲ್ಯ ಹಾಗೂ ಜೀವನ

ಅಕ್ಷರಾಭ್ಯಾಸ - ಶಾಲಾಜೀವನ

ಬಾಲ್ಯದ ಗುರುವಾದ ಒಂದು ಕವಿತೆ

ಮೈಸೂರಿನಲ್ಲಿ ವಿದ್ಯಾಭ್ಯಾಸ

ಮೊದಲ ಇಂಗ್ಲಿಷ್ ಕವನ

ವಸಾಹತು ಸಂದರ್ಭದಲ್ಲಿ ಕರ್ನಾಟಕ

ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ರ ಭೇಟಿ

ಕನ್ನಡದಲ್ಲಿ ಕವನ ರಚನೆ

ಕಲ್ಕತ್ತೆಗೆ ಪಯಣ

ಕೌಟುಂಬಿಕ ಜೀವನ

ಅಧ್ಯಾಪನ, ಸಾಹಿತ್ಯ ಸೃಷ್ಟಿ

೧೯೯೪ ರ ನಂತರದಲ್ಲಿ ಕವಿಮನೆ - ಕವಿಶೈಲ
 


[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿ೦ದ ಆಯ್ದ ಭಾಗ]

ಕುವೆಂಪು ಅವರ ಅಕ್ಷರಾಭ್ಯಾಸ ದಕ್ಷಿಣ ಕನ್ನಡ ಜಿಲ್ಲೆಯ ಐಗಳಿಂದ ಒಂದು ನವರಾತ್ರಿಯ ಸರಸ್ವತೀ ಪೂಜೆಯ ದಿನದಂದು ಮರಳಿನ ಮೇಲೆ ಮೊದಲಾಯಿತು. ಮಿಂದು ಮಡಿಯಾದ ಮೇಲೆ ಅ ಆ ಬರೆದು, ನಡುಬೆರಳ ಮೇಲೆ ತೋರು ಬೆರಳನ್ನು ಇಡುವುದು ಹೇಗೆ ಎಂಬುದನ್ನು ತೋರಿಸಿ, ಕಲಿಸಿ, ಅಕ್ಷರ ತಿದ್ದಲು ಹೇಳಿಕೊಡುವುದರಿಂದ ಕಲಿಕೆ ಪ್ರಾರಂಭವಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಐಗಳು ತೀರಿಕೊಂಡ ಅನಂತರ ಉಡುಪಿಯಿಂದ ಬಂದ ನಾಗಪ್ಪಶೆಟ್ಟರು ಕೇವಲ ಆರು ದಿನಗಳಲ್ಲಿಯೇ ಕುಪ್ಪಳಿ ಮನೆಯ ಶಾಲೆಯಿಂದ ಸಂತೆಗೆಂದು ಕೊಪ್ಪಕ್ಕೆ ಹೋದವರು ಹಿಂತಿರುಗಲಿಲ್ಲ. ಕುಪ್ಪಳಿ ಮನೆಯ ಹುಡುಗರ ರಾಮ - ರಾವಣರ ಯುದ್ಧ ತಾಳಲಾರದೆ ಓಡಿ ಹೋದ ಗುರುಗಳ ಜಾಗಕ್ಕೆ ಮತ್ತೊಬ್ಬರನ್ನು ಕರೆತಂದರು. ಈ ಐಗಳಿಗೋ ಯಾವಾಗಲೂ ಧೂಮಪಾನ, ಕುಡಿತಗಳ ಚಟ ! ಆದ್ದರಿಂದ ಇವರನ್ನು ಮನೆಯವರೇ ಬಿಡಿಸಿದರು .

``ಆಗತಾನೆ ಸಮಗ್ರ ಭರತಖಂಡದಲ್ಲಿ ಸುಸ್ಥಾಪಿತವಾದ ಬ್ರಿಟಿಷ್ ಸಾಮ್ರಾಜ್ಯ ಚೆನ್ನಾಗಿ ಬೇರು ಬಿಡಲು ತೊಡಗಿದ್ದ ಕಾಲ. ಆಡಳಿತ ವ್ಯವಸ್ಥೆಯನ್ನು ಕ್ರಮಗೊಳಿಸಿದ ಆಳರಸರು ಅದನ್ನು ಸುಗಮವಾಗಿ ತಮ್ಮ ಇಚ್ಛೆಯಂತೆ ನಡೆಸಿಕೊಂಡು ಹೋಗಲು ನಮ್ಮವರನ್ನೆ ದುಡಿವಾಳುಗಳನ್ನಾಗಿ ಮಾಡಲು ನಿರ್ಧರಿಸಿ, ಅದಕ್ಕೆ ಅನುಕೂಲವೂ ಅನುರೂಪವೂ ಆದ ವಿದ್ಯಾಭ್ಯಾಸ ಪದ್ಧತಿಯನ್ನು ಜಾರಿಗೆ ತಂದರು. ಅದರಲ್ಲಿ ಅತ್ಯಂತ ಮುಖ್ಯವಾದದ್ದು ಮತ್ತು ಬಹುಕಾಲ ಪರಿಣಾಮಕಾರಿಯಾದದ್ದು - ಇಂಗ್ಲಿಷ್ ಭಾಷೆಯ ಕಲಿಕೆ ಮತ್ತು ಇಂಗ್ಲಿಷ್ ಭಾಷೆಯನ್ನೇ ಶಿಕ್ಷಣ ಮಾಧ್ಯಮವನ್ನಾಗಿ ಅಂಗೀಕರಿಸಿದ್ದು.''

ಆದರೆ ಇನ್ನು ಮುಂದೆ ಕನ್ನಡ ಸಾಕೆ? ಇಂಗ್ಲಿಷಿನವರ ಆಳ್ವಿಕೆಯಲ್ಲಿ ಇಂಗ್ಲಿಷ್ ಕಲಿಯದಿದ್ದರೆ ಆದೀತೆ? ಆದರೆ ಇಂಗ್ಲಿಷ್ ಹೇಳಿಕೊಡುವವರಾರು? ದೊರೆಗಳ ಭಾಷೆಯನ್ನು?'' ಎಂಬ ಮುಂದಾಲೋಚನೆಯಲ್ಲಿ ಮಲೆನಾಡಿಗರು ಇರಬೇಕಾದರೆ ಮತಪ್ರಚಾರ ಮತ್ತು ಮತಾಂತರದ ಉದ್ದೇಶವನ್ನೇ ಪ್ರಧಾನ ಕಸುಬನ್ನಾಗಿಸಿಕೊಂಡಿದ್ದ ಮಿಷನರಿಗಳು ಬ್ರಿಟಿಷ್ ಸಾಮ್ರಾಜ್ಯದ ಮತ್ತು ಕ್ರೈಸ್ತಧರ್ಮದ ಮುಂಚೂಣಿಯ ದಳಗಳಾಗಿ ಸಹ್ಯಾದ್ರಿಯ ಕಾಡುಹಳ್ಳಿಗಳಿಗೆ ನುಗ್ಗಿ, ಸ್ಕೂಲು ಆಸ್ಪತ್ರೆಗಳನ್ನು ತೆರೆದವು. `ಹಿಂದುಗಳಾಗಿ ಇದ್ದು ಬ್ರಾಹ್ಮಣರಿಂದ ಶೂದ್ರರೆಂದು ತಿರಸ್ಕೃತರಾಗಿ ಮೌಢ್ಯ ಅಜ್ಞಾನಗಳ ಅಂಧಕಾರದಲ್ಲಿದ್ದವರಿಗೆ ಬೆಳಕು ತೋರಿಸುತ್ತೇವೆ. ನಿಮ್ಮನ್ನು ಬ್ರಾಹ್ಮಣರ ದಾಸ್ಯದಿಂದ ಪಾರುಮಾಡುತ್ತೇವೆ' ಎಂದು ಮನದಟ್ಟುವಂತೆಬೋಧಿಸಿದರು.ಶೂದ್ರರ ಮಕ್ಕಳಿಗೆ ನವೀನ ವಿದ್ಯಾಭ್ಯಾಸ ಮಾಡಿಸಲು ಅವರನ್ನು ಮೈಸೂರು ಬೆಂಗಳೂರುಗಳ ತಮ್ಮ ವಿದ್ಯಾ ಸಂಸ್ಥೆಗಳಿಗೆ ಕರೆದೊಯ್ದು, ಊಟ ಬಟ್ಟೆ ವಸತಿಗಳನ್ನು ಪುಕ್ಕಟೆಯಾಗಿ ನೀಡಿ ಅವರ ತಂದೆ ತಾಯಿ ಬಂಧುಗಳ ಗೌರವ ಕೃತಜ್ಞತೆಗಳನ್ನು ಸೂರೆಗೊಂಡರು. ಆ ಎಲ್ಲಾ ಸ್ನೇಹ ಸೌಹಾರ್ದ ಸಂಬಂಧಗಳ ಪರಿಣಾಮವಾಗಿಯೇ ಕ್ರೈಸ್ತಪಾದ್ರಿಗಳು ಕುಪ್ಪಳಿ ಮನೆಯ ಉಪ್ಪರಿಗೆಯ ವಿದ್ಯಾಸಂಸ್ಥೆಗೂ ಒಬ್ಬ ಇಂಗ್ಲೀಷ್ ಬಲ್ಲ ಕ್ರೈಸ್ತ ತರುಣನನ್ನು ಮೇಷ್ಟರನ್ನಾಗಿ ಕಳುಹಿಸುವ ಕೃಪೆ ಮಾಡಿದುದು. ಅವರ ಹೆಸರು ಮೋಸಸ್! ಇವರೇ ಮೊದಲು ವಿದ್ಯಾಭ್ಯಾಸದಲ್ಲಿ ಆದರ, ಉತ್ಸಾಹ, ಕುತೂಹಲ ಹುಟ್ಟಿಸಿದ ಪ್ರಥಮ ಗುರುಗಳು. ಅವರ ಆಗಮನದ ತರುವಾಯ `ಐಗಳು' ಎಂಬ ನಾಮ ಸಂಪೂರ್ಣವಾಗಿ ಅಳಿಸಿ ಹೋಗಿ, `ಮೇಸ್ಟರು' ಎಂಬ ಬಿರುದು ಪಟ್ಟಕ್ಕೇರಿತು. ಹಾಗಾಗಿ ಪಾಶ್ಚಾತ್ಯ ಪ್ರಭಾವದ ಆಧುನಿಕ ಪ್ರಪಂಚ ಕುಪ್ಪಳಿ ಮನೆಯ ಉಪ್ಪರಿಗೆಯ ಶಾಲೆ ಪ್ರವೇಶಿಸಿತು.

ಕ್ರೈಸ್ತ ಮಿಷನರಿಗಳ ಪ್ರಭಾವ, ಪೋತ್ಸಾಹ, ಸಹಾಯಗಳಿಂದ ಮೈಸೂರು ಬೆಂಗಳೂರಿಗೆ ಓದಲು ಹೋಗಿ ವಾಪಸ್ಸಾದ ಹಿರಿಯರು - ಇಂಗ್ಲಿಷ್ ಕಲಿಯಬೇಕೆಂಬ ಆಕಾಂಕ್ಷೆಯ ಪರಿಣಾಮ ಅವರ ಮಟ್ಟಿಗೆ ಪರ್ಯಾವಸಾನವಾಗಿದ್ದರೂ, ಮಕ್ಕಳನ್ನು ಓದುವುದಕ್ಕೆ ಹಾಕಬೇಕು ಎಂಬ ಪ್ರಜ್ಞೆ ಅವರಲ್ಲಿ ಉದಿಸುವಂತೆ ಮಾಡಿತ್ತು. ಅವರಿಗೆ ಬುದ್ಧಿ ಸ್ಪಷ್ಟವಾಗಿರದಿದ್ದರೂ, ಬ್ರಿಟೀಷರ ಆಳ್ವಿಕೆಯಲ್ಲಿ, ಮುಂದೆ, ಅವರ ಭಾಷೆಯಾಗಿದ್ದ ಇಂಗ್ಲಿಷನ್ನು ಕಲಿಯದಿದ್ದರೆ, ತಮ್ಮ ಮಕ್ಕಳು ಮುಂದುವರಿಯುವುದು ಸಾಧ್ಯವಿಲ್ಲ ಎಂಬ ಭಾವನೆ ಅವರ ಹೃದಯದಲ್ಲಿ ಮೂಡಿ ಮನವರಿಕೆಯಾದುದರ ಫಲವಾಗಿ ಕುಪ್ಪಳಿ ಮನೆಯ ಮಕ್ಕಳು ತೀರ್ಥಹಳ್ಳಿಯ ಪೇಟೆಯ ಇಸ್ಕೂಲಿಗೆ ಸೇರಿದರು.

ಪುಟ್ಟಪ್ಪನವರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಯ ವಿದ್ಯಾರ್ಥಿ ಜೀವನ ತೀರ್ಥಹಳ್ಳಿಯ ಆಂಗ್ಲೋವರ್ನಾಕ್ಯುಲರ್ ಸ್ಕೂಲ್ನಲ್ಲಿ ಪ್ರವೇಶ ಪಡೆದು ಆರಂಭವಾಯಿತು. ಈ ಶಾಲೆಯ ದಿನಗಳಲ್ಲಿ ತಮ್ಮ ಓರಗೆಯವರ ಒಡನಾಟಗಳಲ್ಲಿ ಕಳೆಯುತ್ತಿರಬೇಕಾದರೆ ೧೯೧೪ - ೧೯೧೮ರ ಅವಧಿಯಲ್ಲಿ ನಡೆದ ಪ್ರಪಂಚದ ಮೊದಲನೆಯ ಮಹಾಯುದ್ಧ ಪುಟ್ಟಪ್ಪನವರ ಬದುಕಿನಲ್ಲಿ ಮರೆಯಲಾಗದ ಘಟನೆ.

ಆ ಮೊದಲನೆಯ ಮಹಾಯುದ್ಧದ ಪರಿಣಾಮವಾಗಿ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಲೋಕದ ಜನ ಹೇಗೆ, ಯಾವ ಯಾವ ರೀತಿಗಳಲ್ಲಿ ಸಂಕಟಪಟ್ಟು ಜರ್ಝರಿತರಾದರೆಂಬುದು ಈಗ ಇತಿಹಾಸ ಪ್ರಸಿದ್ಧವಾಗಿದೆ. ಆದರೆ ಆ ಇತಿಹಾಸದಿಂದ ಸಂಪೂರ್ಣ ಅಲಕ್ಷಿತವಾಗಿ, ಅತ್ಯಂತ ಯಃಕಶ್ಚಿತವಾಗಿ, ಯಾರೂ ಗಮನಿಸದೆ ವಿಸ್ಮೃತವಾಗಿರುವ ಒಂದು ಸಂಗತಿ ಕುಪ್ಪಳಿ ಮನೆತನಕ್ಕೆ ಒದಗಿದ ಕೌಟುಂಬಿಕ ದುರಂತ ಘಟನಾವಳಿ!

ವಿದ್ಯಾಭ್ಯಾಸದ ಪ್ರಯುಕ್ತ ತೀರ್ಥಹಳ್ಳಿಯಲ್ಲಿದ್ದುಕೊಂಡು ಕಾಡುಮೇಡುಗಳಲ್ಲಿ ಅಡ್ಡಾಡುತ್ತಿದ್ದ ಪುಟ್ಟಪ್ಪನವರ ಅವಿಭಕ್ತ ಕುಟುಂಬಕ್ಕೆ ಒಂದನೆಯ ಮಹಾಯುದ್ಧದಿಂದ ಎದುರಾದ ನಷ್ಟದಿಂದ ಚೇತರಿಸಿಕೊಳ್ಳಲಾರದೆ ಕೂಡುಕುಟುಂಬ ಒಡೆದು ಹೋಯಿತು.

ಮೊದಲನೆಯ ಮಹಾಯುದ್ಧದಲ್ಲಿ ಭಾಗವಹಿಸಿದ್ದ `ಎಮ್ಡನ್' ಎಂಬ ಜರ್ಮನ್ ಯುದ್ಧ ನೌಕೆ ಮದ್ರಾಸು ಲೈಟ್ ಹೌಸ್ಗೆ ಗುರಿಯಿಟ್ಟು ಗುಂಡು ಹೊಡೆಯಿತು. ಆ ಗುಂಡಿನ ಬಿಸಿ ಮಲೆನಾಡಿನ ಮೂಲೆಯ ಕುಪ್ಪಳಿ ಮನೆಗೂ ತಗುಲಿತೆಂದರೆ ಯುದ್ಧದ ಭೀಕರ ಪರಿಣಾಮ ಅರ್ಥವಾಗುತ್ತದೆ. ಪುಟ್ಟಪ್ಪನವರ ಚಿಕ್ಕಪ್ಪ ರಾಮಣ್ಣನವರು ಹತ್ತಾರು ಸಾವಿರ ರೂಪಾಯಿಯ ಸಾಲ ಮಾಡಿ ಲಾಭಗಳಿಸುವ ದೃಷ್ಟಿಯಿಂದ ಅಡಕೆಯನ್ನು ಕೊಂಡು ಮದರಾಸು ಮಾರುಕಟ್ಟೆಗೆ ಅದೇ ಸಮಯಕ್ಕೆ ಹೋಗಿದ್ದರು. ಜರ್ಮನ್ ಹಡಗು ಮದ್ರಾಸ್ನ ಲೈಟ್ಹೌಸ್ಗೆ ಗುಂಡು ಹೊಡೆದರ ಫಲವಾಗಿ ವ್ಯಾಪಾರಕ್ಕೆಂದು ಹೋದವರ ಪಾಡು ಹೇಳತೀರದು. ದಿಕ್ಕುಗೆಟ್ಟು ಸಜೀವರಾಗಿ ಬರಿಗೈಯಲ್ಲಿ ಓಡಿ ಬರಬೇಕಾಯಿತು. ಹೀಗೆ ಉಂಟಾದ ನಷ್ಟದಿಂದ ಮನೆಯಲ್ಲಿ ತಲೆದೋರಿದ ಆರ್ಥಿಕ ತೊಂದರೆ, ದಾಯಾದಿಗಳ ಮಧ್ಯೆ ಉಂಟಾದ ವೈಮನಸ್ಸಿನಿಂದ ಪುಟ್ಟಪ್ಪನವರ ತಂದೆ ಕುಪ್ಪಳಿ ಮನೆಯನ್ನು ಬಿಟ್ಟು, ತೀರ್ಥಹಳ್ಳಿಯಲ್ಲಿ ಹುಡುಗರು ಉಳಿದುಕೊಳ್ಳುತ್ತಿದ್ದ ಗುಡಿಸಲಿಗೆ ಬಂದು ನೆಲಸಿದರು.

ತೀರ್ಥಹಳ್ಳಿಗೆ ಬಂದ ಒಂದೆರಡು ದಿನಗಳಲ್ಲಿಯೆ ತಂದೆ ವೆಂಕಟಪ್ಪಗೌಡರಿಗೆ ಶೀತ, ಕೆಮ್ಮು, ಜ್ವರ ವಿಪರೀತವಾಗಿ ಹಾಸಿಗೆ ಹಿಡಿದರು. ಜತೆಗೆ ಕುಟುಂಬದಲ್ಲಿ ತಲೆದೋರಿದ ವೈಮನಸ್ಸಿನ ಫಲವಾಗಿ ಎದುರಾಗಿದ್ದ ಮಾನಸಿಕ ಕ್ಷೋಭೆಯು ಅವರ ಆರೋಗ್ಯವನ್ನು ಮತ್ತಷ್ಟು ಕದಡಿತು. ಹೀಗಾಗಿ ಪುಟ್ಟಪ್ಪ ಅತಿ ಚಿಕ್ಕ ವಯಸ್ಸಿನಲ್ಲಿಯೇ, ೧೯೧೬ ರಲ್ಲಿ ತಮ್ಮ ತಂದೆಯನ್ನು ಕಳೆದುಕೊಳ್ಳಬೇಕಾಯಿತು.

ಈ ವೇಳೆಯಲ್ಲಿ ಪುಟ್ಟಪ್ಪನವರ ಹಿರಿಯ ತಂಗಿಯಾದ ದಾನಮ್ಮ ತೀರ್ಥಹಳ್ಳಿ ಶಾಲೆಗೆ ಸೇರಿದ್ದರಿಂದ ಅವರಿಗೆ ಅಡುಗೆ ಮಾಡುವುದಕ್ಕಾಗಿ ಕಿರಿಯ ತಂಗಿ ಪುಟ್ಟಮ್ಮಳೊಡನೆ ತಾಯಿ ಸೀತಮ್ಮನವರೂ ತೀರ್ಥಹಳ್ಳಿಗೆ ಬಂದು ನೆಲಸಿದರು. ಪುಟ್ಟಪ್ಪನವರು ತೀರ್ಥಹಳ್ಳಿಯಲ್ಲಿದ್ದುಕೊಂಡು ೧೯೧೮-೧೯೨೦ರ ನಡುವೆ ಕನ್ನಡ ಮತ್ತು ಇಂಗ್ಲೀಷ್ ಲೋಯರ್ ಸೆಕಂಡರಿ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾದರು. ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದ ನಂತರ ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಬೇಕೆಂಬುದು ಪುಟ್ಟಪ್ಪನವರ ಇಚ್ಛೆಯಾಗಿತ್ತು. ಆದರೆ ತಂದೆಯ ಮರಣಾನಂತರ ಕುಪ್ಪಳಿ ಮನೆಯ ಕುಟುಂಬದ ಯಜಮಾನಿಕೆ ಸಂಪೂರ್ಣವಾಗಿ ರಾಮಣ್ಣಗೌಡರದಾಗಿತ್ತು. ಮೈಸೂರಿನಲ್ಲಿ ಓದು ಮುಂದುವರಿಸಬೇಕೆಂಬ ಪುಟ್ಟಪ್ಪನವರ ಬಯಕೆಗೆ ಚಿಕ್ಕಪ್ಪ ರಾಮಣ್ಣಗೌಡರ ಪೋತ್ಸಾಹ ದೊರೆಯಲಿಲ್ಲ. ಮನೆ ಹಿಸ್ಸೆಯಾಗಬೇಕೆಂದೂ, ಊರಲ್ಲೇ ಇದ್ದು ಮನೆಯ ಮೇಲ್ವಿಚಾರಣೆ ನೋಡಿಕೊಳ್ಳಬೇಕೆಂದೂ ಅವರು ಸೂಚಿಸಿದರು. ಓದು ಮುಂದುವರಿಸಬೇಕೆಂಬ ಮಹದಾಸೆಯಿಂದ ಏನೇ ತೊಂದರೆ ಬಂದರೂ ತಾನು ಓದನ್ನು ನಿಲ್ಲಿಸಬಾರದೆಂಬುದು ಪುಟ್ಟಪ್ಪನವರ ಅಂದಿನ ನಿಲುವಾಗಿತ್ತು. ಅದೇ ಸಮಯಕ್ಕೆ ಮೈಸೂರು ಸಂಸ್ಥಾನದ ವಿದ್ಯಾಭ್ಯಾಸ ಇಲಾಖೆಯ ಪ್ರಧಾನಾಧಿಕಾರಿಯಾಗಿದ್ದ ಸಿ. ಆರ್. ರೆಡ್ಡಿಯವರು ತಮ್ಮ ಶಾಲಾ ಪರಿಶೀಲನಾ ಪ್ರವಾಸದಲ್ಲಿ ತೀರ್ಥಹಳ್ಳಿಗೆ ಬಂದಿದ್ದರು. ಅವರು ಒಕ್ಕಲಿಗರಾದ್ದರಿಂದ, ಅದರಲ್ಲೂ ಬ್ರಾಹ್ಮಣೇತರರ ಏಳಿಗೆಗೆ ಶ್ರಮಿಸುತ್ತಿದ್ದವರಾದ್ದರಿಂದ ಆ ನಾಡಿನ ಗೌಡರುಗಳಲ್ಲಿ ಹೆಸರುವಾಸಿಯಾಗಿ, ಮೈಸೂರಿನ ಪ್ರಜಾಪ್ರತಿನಿಧಿ ಸಭೆಯ ಮೆಂಬರೂ ಆಗಿದ್ದ ದೇವಂಗಿ ರಾಮಣ್ಣಗೌಡರನ್ನು ಸಂಧಿಸುವ ಅನಿವಾರ್ಯವಿತ್ತು. ಆಗ ರೆಡ್ಡಿಯವರೊಡನೆ ಇಂಗ್ಲೀಷಿನಲ್ಲಿ ಸಂಭಾಷಿಸಲು ರಾಮಣ್ಣಗೌಡರು ಇಂಗ್ಲಿಷ್ ಬಲ್ಲ ತಮ್ಮ ಅಳಿಯ ಮಂಜಪ್ಪಗೌಡರನ್ನು ಅಲ್ಲಿಗೆ ಕರೆಸಿಕೊಂಡರು. ಇಂಗ್ಲಿಷ್ ಕಲಿಯಬೇಕೆಂಬ ಉತ್ಸಾಹದಲ್ಲಿದ್ದ ಪ್ರತಿಭಾಶಾಲಿಯಾದ ಪುಟ್ಟಪ್ಪನವರ ವಿಶೇಷ ಆಸಕ್ತಿಯನ್ನು ಗ್ರಹಿಸಿದ್ದ ಮಂಜಪ್ಪಗೌಡರು ಸಿ. ಆರ್. ರೆಡ್ಡಿಯವರೊಡನೆ ಮಾತನಾಡಿಸಿ, ಅವರ ವಿದ್ಯಾಭ್ಯಾಸ ಮೈಸೂರಿನಲ್ಲಿ ಮುಂದುವರಿಸಲು ಆಸ್ಥೆ ತೋರಿದರು. ಇದರಿಂದ ಪುಟ್ಟಪ್ಪನವರ ಮೈಸೂರಿಗೆ ಓದಲು ಹೋಗಬೇಕೆಂಬ ಹೆಬ್ಬಯಕೆ ಈಡೇರಿತು.

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -