English Website

- ಜೀವನ ಚರಿತ್ರೆ - ಅಧ್ಯಾಪನ, ಸಾಹಿತ್ಯ ಸೃಷ್ಟಿ -
ಪೀಠಿಕೆ

ಕುವೆಂಪು ಅವರ ಜನನ, ಬಾಲ್ಯ ಹಾಗೂ ಜೀವನ

ಅಕ್ಷರಾಭ್ಯಾಸ - ಶಾಲಾಜೀವನ

ಬಾಲ್ಯದ ಗುರುವಾದ ಒಂದು ಕವಿತೆ

ಮೈಸೂರಿನಲ್ಲಿ ವಿದ್ಯಾಭ್ಯಾಸ

ಮೊದಲ ಇಂಗ್ಲಿಷ್ ಕವನ

ವಸಾಹತು ಸಂದರ್ಭದಲ್ಲಿ ಕರ್ನಾಟಕ

ಐರಿಷ್ ಕವಿ ಜೇಮ್ಸ್ ಎಚ್. ಕಸಿನ್ಸ್ರ ಭೇಟಿ  

ಕನ್ನಡದಲ್ಲಿ ಕವನ ರಚನೆ

ಕಲ್ಕತ್ತೆಗೆ ಪಯಣ

ಕೌಟುಂಬಿಕ ಜೀವನ

ಅಧ್ಯಾಪನ, ಸಾಹಿತ್ಯ ಸೃಷ್ಟಿ

೧೯೯೪ ರ ನಂತರದಲ್ಲಿ ಕವಿಮನೆ - ಕವಿಶೈಲ
 


[ಡಾ.ಕೆ.ಸಿ.ಶಿವಾರೆಡ್ಡಿಯವರ ಯುಗದ ಕವಿ ಪುಸ್ತಕದಿ೦ದ ಆಯ್ದ ಭಾಗ]

ಪ್ರಥಮ ಕವನ ಸಂಕಲನ `ಕೊಳಲು' ಮೊದಲು ಪ್ರಕಟಗೊಂಡಿದ್ದು ೦೭-೦೧-೧೯೩೦ರಲ್ಲಿ. ಮಾಸ್ತಿ, ಸಿ.ಕೆ. ವೆಂಕಟರಾಮಯ್ಯ, ಐ.ಹೆಚ್. ಕೃಷ್ಣರಾವ್ ಮತ್ತು ತಿರುಮಲೆ ಶ್ರೀನಿವಾಸಚಾರ್ಯ, ಈ ನಾಲ್ವರ ಪೋತ್ಸಾಹದಿಂದ `ಕೊಳಲು' ಬಿ.ಎಂ.ಶ್ರೀ ರವರ ಮುನ್ನುಡಿಯೊಂದಿಗೆ ಪ್ರಕಟವಾಯಿತು. ಇಲ್ಲಿಯವರೆಗೂ ಪ್ರಕಟವಾದ ಪ್ರಾತಿನಿಧಿಕ ಸಂಕಲನಗಳಲ್ಲಿ `ಕೊಳಲು' ಮಹತ್ವದ ಸ್ಥಾನವನ್ನು ಪಡೆದಿದೆ. ಪುಟ್ಟಪ್ಪನವರ ಕವನಗಳಲ್ಲಿನ ಆತ್ಮ ಮತ್ತು ಜೀವಂತಿಕೆಯಿಂದ ದತ್ತವಾಗಿರುವ ಅಮೃತತ್ವವನ್ನು ಬಿ.ಎಂ.ಶ್ರೀ.ಯವರು ಆ ಕಾಲದಲ್ಲಿಯೇ ಸಮರ್ಥವಾಗಿ ಗುರುತಿಸಿದ್ದಾರೆ. ಇದೇ ಕಾಲಮಾನದಲ್ಲಿ `ಸ್ವಾಮಿ ವಿವೇಕಾನಂದ' (ಡಿ.ವಿ.ಜಿ. ಯವರ ಮುನ್ನುಡಿಯೊಂದಿಗೆ, ೧೯೨೯), `ಬಿರುಗಾಳಿ' (ಟಿ.ಎಸ್. ವೆಂಕಣ್ಣಯ್ಯನವರ ಮುನ್ನುಡಿಯೊಂದಿಗೆ, ೧೯೩೦) ಕೃತಿಗಳು ಪ್ರಕಟಗೊಂಡವು. ಇದೇ ಸಮಯದಲ್ಲಿ `ಮಹಾರಾತ್ರಿ', `ಶ್ಮಶಾನ ಕುರುಕ್ಷೇತ್ರಂ', `ಜಲಗಾರ' (೧೯೩೧) ಮತ್ತು 'ರಕ್ತಾಕ್ಷಿ' (ಎ.ಆರ್. ಕೃಷ್ಣಶಾಸ್ತ್ರಿಯವರ ಮುನ್ನುಡಿಯೊಂದಿಗೆ ೧೯೩೨) ನಾಟಕಗಳೂ ಪ್ರಕಟಗೊಂಡವು.

೧೯೩೩ರಲ್ಲಿ `ಪಾಂಚಜನ್ಯ', `ಮಲೆನಾಡಿನ ಚಿತ್ರಗಳು', ೧೯೩೪ ರಲ್ಲಿ `ನವಿಲು', `ಶ್ರೀ ರಾಮಕೃಷ್ಣ ಪರಮಹಂಸ', ೧೯೩೬-೧೯೩೮ ರಲ್ಲಿ `ಕಿಂದರಿ ಜೋಗಿ ಮತ್ತು ಇತರ ಕಥನ ಕವನಗಳು' (ಬಿ. ಎಂ. ಶ್ರೀ ಮುನ್ನುಡಿಯೊಡನೆ), `ಚಿತ್ರಾಂಗದಾ', `ಕಾನೂರು ಹೆಗ್ಗಡಿತಿ', `ಸಂನ್ಯಾಸಿ ಮತ್ತು ಇತರ ಕಥೆಗಳು' ಪ್ರಕಟವಾದವು. ಅಧ್ಯಾಪನ ಮತ್ತು ಕೌಟುಂಬಿಕ ಕೆಲಸಗಳ ನಡುವೆಯೂ ಪುಟ್ಟಪ್ಪನವರ ಸಾಹಿತ್ಯ ಕೃಷಿ ನಿರಂತರವಾಗಿ ಮುಂದುವರೆಯಿತು. `ನನ್ನ ದೇವರು ಮತ್ತು ಇತರ ಕಥೆಗಳು' (ಶ್ರೀನಿವಾಸ ಮುನ್ನುಡಿಯೊಂದಿಗೆ ೧೯೪೦), `ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ' (೧೯೪೪), ಕೋಗಿಲೆ ಮತ್ತು ಸೋವಿಯಟ್ ರಷ್ಯಾ (೧೯೪೪), ಶೂದ್ರ ತಪಸ್ವಿ (೧೯೪೪), ಕಾವ್ಯ ವಿಹಾರ (೧೯೪೬), ಕಿಂಕಿಣಿ (೧೯೪೬), ಅಗ್ನಿಹಂಸ (೧೯೪೬), ಪ್ರೇಮ ಕಾಶ್ಮೀರ (೧೯೪೬), ಬೆರಳ್ಗೆ ಕೊರಳ್ (೧೯೪೭), ಮರಿ ವಿಜ್ಞಾನಿ, ಮೇಘಪುರ, ನನ್ನ ಮನೆ (೧೯೪೭), ಬಲಿದಾನ (೧೯೪೮), ಶ್ರೀ ರಾಮಾಯಣ ದರ್ಶನಂ ಸಂ. ೧ (೧೯೪೯), ಸಂ. ೨ (೧೯೫೭), ತಪೋನಂದನ (೧೯೫೧), ಜೇನಾಗುವಾ (೧೯೫೨), ವಿಭೂತಿ ಪೂಜೆ (೧೯೫೩), ಚಂದ್ರಮಂಚಕೆ ಬಾ ಚಕೋರಿ (೧೯೫೪), ಇಕ್ಷುಗಂಗೋತ್ರಿ (೧೯೫೭), ಕೃತ್ತಿಕೆ (೧೯೫೯), ದ್ರೌಪದಿಯ ಶ್ರೀಮುಡಿ (೧೯೬೦), ರಸೋ ವೈಸಃ (೧೯೬೨), ಅನಿಕೇತನ (೧೯೬೩), ಚಂದ್ರಹಾಸ (೧೯೬೩), ಷಷ್ಠಿನಮನ (೧೯೬೪), ಮಲೆಗಳಲ್ಲಿಮದುಮಗಳು (೧೯೬೭), ವಿಚಾರ ಕ್ರಾಂತಿಗೆ ಆಹ್ವಾನ (೧೯೭೬), ನೆನಪಿನ ದೋಣಿಯಲ್ಲಿ (೧೯೮೦) - ಹೀಗೆ ಪುಟ್ಟಪ್ಪನವರ ಸಾಹಿತ್ಯ ಕೃತಿಗಳು ವಿಫುಲವಾಗಿ ಹೊರಬಂದವು

೧೯೩೬ ರಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಉಪಪ್ರಾಧ್ಯಾಪಕರಾಗಿ ಕೆಲಸ ಮಾಡಿದ ಪುಟ್ಟಪ್ಪನವರು ೧೯೪೬ ರಲ್ಲಿ ಎ. ಆರ್. ಕೃಷ್ಣಶಾಸ್ತ್ರಿಗಳ ನಿವೃತ್ತಿಯ ನಂತರ ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ಪ್ರಾಧ್ಯಾಪಕರಾದರು. ಆಧುನಿಕ ವಿಜ್ಞಾನ, ಮನೋವಿಜ್ಞಾನ, ಪಾಶ್ಚಾತ್ಯ - ಪೌರಾತ್ಯ ತತ್ತ್ವಶಾಸ್ತ್ರ ಮತ್ತು ಸೌಂದರ್ಯಮೀಮಾಂಸೆಯ ಹಿನ್ನೆಲೆಯಲ್ಲಿ ಕಾವ್ಯಮೀಮಾಂಸೆಯನ್ನು ಬೋಧಿಸುವುದು ಪುಟ್ಟಪ್ಪನವರ ವಿಶೇಷ ಆಸಕ್ತಿಯಾಗಿತ್ತು. ಸಾಹಿತ್ಯ ಪ್ರಕಾರಗಳ ತೌಲನಿಕ ಅಧ್ಯಯನವೂ, ತೌಲನಿಕ ಕಾವ್ಯಮೀಮಾಂಸೆಯ ಅಧ್ಯಯನವೂ ಕನ್ನಡ ಸಂದರ್ಭದಲ್ಲಿ ಅಗತ್ಯವೆಂಬುದನ್ನು ಪುಟ್ಟಪ್ಪನವರು ಗಾಢವಾಗಿ ನಂಬಿದ್ದರು. ಹಾಗಾಗಿ ಕಾವ್ಯಮೀಮಾಂಸೆ ಪುಟ್ಟಪ್ಪನವರ ಪ್ರೀತಿಯ ಬೋಧನಾಸಕ್ತಿಯಾಗಿತ್ತು. ಪಾಶ್ಚಾತ್ಯ ಮತ್ತು ಪೌರಾತ್ಯ ಕಾವ್ಯ ಮೀಮಾಂಸಕರ ಸಿದ್ಧಾಂತಗಳನ್ನು, ಸೂತ್ರಗಳನ್ನು ಮುಖಾಮುಖಿಗೊಳಿಸುವುದರೊಂದಿಗೆ ಹೊಸ ಪ್ರಯೋಗಗಳಿಗೆ ದಾರಿಮಾಡಿಕೊಟ್ಟರು. ಈ ತತ್ತ್ವಗಳನ್ನು ಕನ್ನಡ ಕೃತಿಗಳ ಸಂದರ್ಭದಲ್ಲಿ ಅಳವಡಿಸುವುದರೊಂದಿಗೆ ತಮ್ಮದೇ ಆದ ವಿಮರ್ಶೆಯ ಮಾರ್ಗವನ್ನು ಹುಟ್ಟುಹಾಕಿದರು .

೧೯೫೫ ರಲ್ಲಿ ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ (ಕನ್ನಡಕ್ಕೆ ಮೊದಲಿಗೆ) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು. ಕರ್ನಾಟಕದಾದ್ಯಂತ ಪುಟ್ಟಪ್ಪನವರಿಗೆ ಈ ಸಂದರ್ಭದಲ್ಲಿ ಸನ್ಮಾನ - ಅಭಿನಂದನೆಗಳನ್ನು ಕನ್ನಡ ಜನತೆ ಮತ್ತು ಅವರ ಆತ್ಮೀಯರು ಸಲ್ಲಿಸಿದರು. ಇದೇ ವರ್ಷ ಮಹಾರಾಜಾ ಕಾಲೇಜಿನ ಪ್ರಿನ್ಸಿಪಾಲರಾಗಿ ನೇಮಕಗೊಂಡರು. ೩೩ನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮೈಸೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಈ ಕಾಲಮಾನದಲ್ಲಿ ಸಂಯೋಜಿಸಿದ ಕೀರ್ತಿ ಪುಟ್ಟಪ್ಪನವರಿಗೆ ಸೇರುತ್ತದೆ. ೧೯೫೬ ರಲ್ಲಿ ಮೈಸೂರು ವಿಶ್ವವಿದ್ಯಾಲಯ ಗೌರವ ಡಿ. ಲಿಟ್. ಪ್ರಶಸ್ತಿಯನ್ನು ಪ್ರದಾನ ಮಾಡಿತು. ಇದೇ ವರ್ಷದಲ್ಲಿ ಕರ್ನಾಟಕ ಸರಕಾರ ಪುಟ್ಟಪ್ಪನವರನ್ನು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ ನೇಮಿಸಿತು. ಕನ್ನಡದ ಪ್ರಾಧ್ಯಾಪಕ, ಮಹತ್ವದ ಲೇಖಕರಾದ ಪುಟ್ಟಪ್ಪನವರಿಗೆ ಇಂಥ ಗೌರವಸ್ಥಾನ ದೊರಕಿದುದು ಕರ್ನಾಟಕ ಜನತೆಯು ನಾಡಿನ ಶುಭಸೂಚನೆಯೆಂದೇ ಭಾವಿಸಿತು. ಮತ್ತು ಅದಕ್ಕೆ ಕಾರಣವಾದ ಪುಟ್ಟಪ್ಪನವರನ್ನು ಮನಃಪೂರ್ವಕವಾಗಿ ಅಭಿನಂದಿಸಿತು.

ಪುಟ್ಟಪ್ಪನವರು ಉಪಕುಲಪತಿ ಹುದ್ದೆಯನ್ನು ಸ್ವೀಕರಿಸಿದ ಸಂದರ್ಭದಲ್ಲಿ ವಿಶ್ವವಿದ್ಯಾಲಯವು ಅನೇಕ ಸಮಸ್ಯೆಗಳ ಆಗರವಾಗಿತ್ತು. ಸಮಸ್ಯೆಗಳ ಸುಧಾರಣೆಗೆ ಕೈ ಹಾಕಿದ ಪುಟ್ಟಪ್ಪನವರು ಅನೇಕ ಇರಿಸುಮುರಿಸುಗಳಿಗೆ ಪಕ್ಕಾಗಿದ್ದೂ ಉಂಟು. ಪುಟ್ಟಪ್ಪನವರ ಪುರೋಭಿವೃದ್ಧಿಯನ್ನು ಸಹಿಸಲಾರದ ವಿಶ್ವವಿದ್ಯಾಲಯದ ಸಿಬ್ಬಂದಿಗಳು ಅನೇಕ ಕಿರುಕುಳಗಳನ್ನು ಕೊಡತೊಡಗಿದರು. ಇಂಥ ಅನೇಕ ಎಡರು - ತೊಡರುಗಳ ನಡುವೆಯೂ ವಿಶ್ವವಿದ್ಯಾಲಯಕ್ಕೆ ಒದಗಿದ್ದ ಅನೇಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪುಟ್ಟಪ್ಪನವರು ಸಫಲರಾದರು. ವಿಶ್ವವಿದ್ಯಾಲಯದಲ್ಲಿ ಕನ್ನಡ ಮಾಧ್ಯಮವನ್ನು ಜಾರಿಗೆ ತಂದುದು ಮತ್ತು ಸ್ನಾತಕೋತ್ತರ ಶಿಕ್ಷಣ, ಸಂಶೋಧನೆಗಳಿಗಾಗಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಮಾನಸ ಗಂಗೋತ್ರಿಯನ್ನು ಪ್ರಾರಂಭಿಸಿದ್ದು ಉಪಕುಲಪತಿಗಳಾಗಿ ಪುಟ್ಟಪ್ಪನವರು ಸಾಧಿಸಿದ ಮಹತ್ವದ ಸಾಧನೆಗಳು.

೧೯೫೭ ರಲ್ಲಿ ಧಾರವಾಡದಲ್ಲಿ ನಡೆದ ೩೯ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪುಟ್ಟಪ್ಪನವರು ಆಯ್ಕೆಯಾದರು. ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅವರು ಸಲ್ಲಿಸಿದ ಸೇವೆಗಾಗಿ ೧೯೫೮ ಜನವರಿ ೨೬ ರಂದು ಕೇಂದ್ರ ಸರ್ಕಾರದ ಪರವಾಗಿ ರಾಷ್ಟ್ರಪತಿಗಳು `ಪದ್ಮಭೂಷಣ' ಪ್ರಶಸ್ತಿಯನ್ನು ನೀಡಿ ಗೌರವ ಸಲ್ಲಿಸಿದರು.

೧೯೬೦ ರಲ್ಲಿ ಪುಟ್ಟಪ್ಪನವರು ಕುಲಪತಿಗಳ ಸ್ಥಾನದಿಂದ ನಿವೃತ್ತರಾದರು. ೧೯೬೧ ಡಿಸೆಂಬರ್ ತಿಂಗಳಲ್ಲಿ ಮೈಸೂರಿಗೆ ಬಂದಿದ್ದ ಡಾ ರಾಮಮನೋಹರ ಲೋಹಿಯಾ ಅವರು ಪುಟ್ಟಪ್ಪನವರನ್ನು ಭೇಟಿ ಮಾಡಿದರು. ೧೯೬೩ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಸನ್ಮಾನಿಸಿತು. ಕರ್ನಾಟಕ ಸರ್ಕಾರ ೧೯೬೪ ರಲ್ಲಿ ಪುಟ್ಟಪ್ಪನವರಿಗೆ `ರಾಷ್ಟ್ರಕವಿ' ಪ್ರಶಸ್ತಿಯನ್ನು ನೀಡಿ ಗೌರವಿಸಿತು.

೧೯೬೮ರಲ್ಲಿ ಭಾರತದ ಅತ್ಯುನ್ನತ ಸಾಹಿತ್ಯಕ್ಕೆ ಮೀಸಲಾದ ಜ್ಞಾನಪೀಠ ಪ್ರಶಸ್ತಿಯು ಪುಟ್ಟಪ್ಪನವರಿಗೆ ದೊರೆಯಿತು. ಕನ್ನಡಕ್ಕೆ ಮೊದಲ `ಜ್ಞಾನಪೀಠ'ವನ್ನು ತಂದುಕೊಟ್ಟ ಕೀರ್ತಿ ಅವರದು. ಹಾಗೆಯೇ ಮೊದಲ `ಪಂಪ ಪ್ರಶಸ್ತಿ'ಯನ್ನೂ (೧೯೮೮) ಹಾಗೂ ಮೊದಲ `ಕರ್ನಾಟಕ ರತ್ನ' ಪ್ರಶಸ್ತಿಯನ್ನೂ (೧೯೯೨) ಕರ್ನಾಟಕ ಸರ್ಕಾರ ಸಲ್ಲಿಸಿತು. ಹಂಪಿ ಕನ್ನಡ ವಿಶ್ವವಿದ್ಯಾಲಯವು ೧೯೯೫ ರಲ್ಲಿ ಪುಟ್ಟಪ್ಪನವರಿಗೆ `ನಾಡೋಜ' ಪ್ರಶಸ್ತಿಯನ್ನು ಪ್ರಕಟಿಸಿತು. ಆದರೆ ಅದನ್ನು ಪ್ರದಾನ ಮಾಡುವವರೆಗೆ ಅವರು ಉಳಿಯಲಿಲ್ಲ. ಅನಂತರ ಅದನ್ನು ಮರಣೋತ್ತರವಾಗಿ 'ನಾಡೋಜ' ಪ್ರಶಸ್ತಿಯನ್ನು ನೀಡುವ ಮೂಲಕ ಕವಿಸ್ಮರಣೆ ಮಾಡಿ ಗೌರವ ಸೂಚಿಸಲಾಯಿತು. ೧೯೯೪ ನವೆಂಬರ್ ತಿಂಗಳ ೧೦ ರಂದು ರಾತ್ರಿ ೧ ಗಂಟೆಗೆ ಕುವೆಂಪು ಅವರು ನಿಧನರಾದರು. ಅಂದರೆ ೧೯೯೪ ನವೆಂಬರ್ ೧೧ ರ ರಾತ್ರಿ ಬೆಳಗಿನ ಜಾವ ಈ ಶತಮಾನದ ಕವಿಚೇತನಕ್ಕೆ ಕನ್ನಡ ಜನತೆ ಗೌರವ ಶ್ರದ್ಧಾಂಜಲಿಯನ್ನು ಸಲ್ಲಿಸಿತು. ಸಾವಿರಾರು ಜನರು ಬೇರೆ ಬೇರೆ ಊರುಗಳಿಂದಲೂ `ಉದಯರವಿಗೆ' ತೆರಳಿ ಸಾಲುಗಟ್ಟಿ ಕುವೆಂಪು ಅವರ ಅಂತಿಮದರ್ಶನವನ್ನು ಪಡೆದರು. ಅನಂತರ ಕುವೆಂಪು ಅವರ ಪಾರ್ಥೀವ ಶರೀರವನ್ನು ಕುಪ್ಪಳಿಗೆ ತಂದು ಸರಕಾರಿ ಗೌರವಗಳೊಂದಿಗೆ ಅಗ್ನಿಸ್ಪರ್ಶ ಮಾಡಲಾಯಿತು.

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -