English Website

ಉದಯರವಿ ಪ್ರಕಾಶನ ಮತ್ತು ಪುಸ್ತಕ ಪ್ರಕಾಶನದ ಎಲ್ಲಪುಸ್ತಕಗಳೂ ನಮ್ಮಲ್ಲಿ ದೊರೆಯುತ್ತವೆ.

ಉದಯರವಿ ಪ್ರಕಾಶನ


ಶ್ರೀ ಕುವೆಂಪುರವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ನೇಮಕಗೊಂಡಾಗ ೧೬೩೬ರಲ್ಲಿ ಕಟ್ಟಿಸಿದ ಅವರ ಮನೆಯ ಹೆಸರು ‘'ಉದಯರವಿ'’. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಕೆಲಕಾಲ ಅಧ್ಯಾಪಕರಾಗಿದ್ದ ಕಾಲವನ್ನು ಬಿಟ್ಟರೆ ಅವರು ತಮ್ಮ ಮಿಕ್ಕ ಜೀವಿತ ಕಾಲವನ್ನು ಉದಯರವಿಯಲ್ಲೇ ಕಳೆದರು. ವಿಶ್ವವಿದ್ಯಾಲಯದ ಉಪಕುಲಪತಿಗಳಾದಾಗ ಸಹ ಅವರು ಯೂನಿವರ್ಸಿಟಿ ಆವರಣದಲ್ಲಿದ್ದ ಉಪಕುಲಪತಿಗಳ ನಿವಾಸಕ್ಕೆ ಹೋಗಲಿಲ್ಲ. ಕುವೆಂಪುರವರು ತಮ್ಮ ಕೃತಿಗಳನ್ನು ತಾವೇ ಪ್ರಕಟಿಸಲು ಆರಂಭಿಸಿದಾಗ ಅದನ್ನು ‘'ಉದಯರವಿ’ ಪ್ರಕಾಶನ' ಎಂಬ ಹೆಸರಿನಲ್ಲಿ ಪ್ರಾರಂಭಿಸಿದರು. ಇಂದು ಕುವೆಂಪುರವರ ಕೃತಿಗಳೊಟ್ಟಿಗೇ ಉದಯರವಿ ಪ್ರಕಾಶನ ಸಹ ಕನ್ನಡ ಸಾಹಿತ್ಯ ಚರಿತ್ರೆಯ ಅವಿಭಾಜ್ಯ ಅಂಗ.

ಕುವೆಂಪುರವರ ಮೊಟ್ಟಮೊದಲ ಕೃತಿ ‘'ಸಾಹಿತ್ಯ ಪ್ರಚಾರ' ವನ್ನು’ ೧೯೩೦ರಲ್ಲಿ ಪ್ರಕಟಿಸಿದ್ದು ಶಿವಮೊಗ್ಗಾದ ಕರ್ನಾಟಕ ಸಂಘ. ಆಗ ಅದರ ಬೆಲೆ ಎರಡು ಆಣೆ (ಎಂದರೆ ಈಗಿನ ಹನ್ನೆರಡು ಪೈಸೆಗೆ ಸಮ ಎನ್ನಬಹುದು). ಆನಂತರ 'ರಕ್ತಾಕ್ಷಿ' ನಾಟಕ ೧೯೩೨ರಲ್ಲಿ, 'ಪಾಂಚಜನ್ಯ' ಕವನ ಸಂಕಲನ ೧೯೩೪ರಲ್ಲಿ, 'ನವಿಲು' ಕವನ ಸಂಕಲನ ೧೯೩೪ರಲ್ಲಿ ಕರ್ನಾಟಕ ಸಂಘದಿಂದಲೇ ಪ್ರಕಟಿಸಲ್ಪಟ್ಟುವು.

೧೯೩೬ರಿಂದ ಈಚೆಗೆ ಕುವೆಂಪುರವರ ಆಪ್ತರಲ್ಲೊಬ್ಬರಾದ ಕೂಡಲಿ ಚಿದಂಬರಂ ಅವರು ಕುವೆಂಪುರವರ ಕೃತಿಗಳನ್ನು ‘ಕಾವ್ಯಾಲಯ’ ಪ್ರಕಾಶನದಲ್ಲಿ ಪ್ರಕಟಿಸಿದರು. ಈ ಪ್ರಕಾಶನದಿಂದಲೇ ೧೯೨೬ರಲ್ಲಿ ಶ್ರೀ ಕುವೆಂಪುರವರ ‘'ಕಿಂದರಿ ಜೋಗಿ' ಮತ್ತು ಇತರ ಕವನಗಳು, ‘'ಸನ್ಯಾಸಿ ಮತ್ತು ಇತರ ಕಥೆಗಳು' ಪ್ರಕಟಿಸಲ್ಪಟ್ಟುವು. ಮಾರನೆ ವರ್ಷ 'ಕಾನೂರು ಹೆಗ್ಗಡತಿ' ಕಾದಂಬರಿ ನಾಲ್ಕು ಭಾಗಗಳಲ್ಲಿ ಪ್ರಕಟವಾಯ್ತು. ಈ ನಡುವೆ ಹಲವು ಕೃತಿಗಳನ್ನು ಶ್ರೀ ಕುವೆಂಪುರವರೇ ಮುದ್ರಿಸಿ ಪ್ರಕಟಿಸಿದ್ದರೂ ಅದರ ಮಾರಾಟವನ್ನು ಮಾತ್ರ ಕಾವ್ಯಾಲಯ ಮತ್ತು ಬೆಂಗಳೂರಿನ ರಾಮಮೋಹನ ಕಂಪೆನಿ ವಹಿಸಿಕೊಂಡಿದ್ದವು.

೧೯೫೧ರಲ್ಲಿ 'ರಾಮಾಯಣ ದರ್ಶನಂ' ಎರಡನೆ ಭಾಗವನ್ನು ಶ್ರೀ ಕುವೆಂಪುರವರೇ ಉದಯರವಿ ಪ್ರಕಾಶನದ ಹೆಸರಿನಲ್ಲೇ ಪ್ರಕಟಿಸಿದರು. ಆನಂತರ ಅವರ ಎಲ್ಲಾ ಕೃತಿಗಳೂ ಉದಯರವಿ ಪ್ರಕಾಶನದ ಹೆಸರಿನಲ್ಲೇ ಬಂದವು. ಕುವೆಂಪುರವರ ನಿಧನಾನಂತರ ಅವರ ಮಕ್ಕಳಾದ ಪೂರ್ಣಚಂದ್ರ ತೇಜಸ್ವಿ ಮತ್ತು ತಾರಿಣಿ ಚಿದಾನಂದ ಇಬ್ಬರೂ ಪ್ರಕಾಶನವನ್ನು ಮುಂದುವರಿಸಿ ಕುವೆಂಪುರವರ ಎಲ್ಲ ಕೃತಿಗಳೂ ಮಾರುಕಟ್ಟೆಯಲ್ಲಿ ಯಾವಾಗಲೂ ಲಭ್ಯವಿರುವಂತೆ ನೋಡಿಕೊಂಡಿದ್ದಾರೆ.

ಪುಸ್ತಕ ಪ್ರಕಾಶನ

'ಪುಸ್ತಕ ಪ್ರಕಾಶನ' ಕನ್ನಡ ಪ್ರಕಾಶನ ಕ್ಷೇತ್ರದಲ್ಲಿ ಒಂದು ಅಸದೃಶ ಸಾಹಸ. ವಸ್ತು, ವಿಷಯ, ಪುಸ್ತಕದ ಕಾಗದ, ರಕ್ಷಾಪುಟ ವಿನ್ಯಾಸ, ಶ್ರೇಷ್ಠ ಮುದ್ರಣ, ಓದುಗರಿಗೆ ವಿಚಾರ ತಲುಪಿಸುವ ಗದ್ಯ ಶೈಲಿ, ಪ್ರತಿಯೊಂದರಲ್ಲೂ ಜಗತ್ತಿನ ಅತ್ಯುತ್ತಮ ಪ್ರಕಾಶನಗಳಿಗೆ ಸರಿಗಟ್ಟುವ ಸಾಧನೆ ಮಾಡಬೇಕೆಂಬ ನಿರ್ಧಾರದಿಂದ ನಾಡಿನ ಅಗ್ರಮಾನ್ಯ ಲೇಖಕರ, ಕಲಾವಿದರ, ತಂತ್ರಜ್ಞರ, ಮುದ್ರಕರ ಅವಿರತ ಶ್ರಮ, ಸಾಧನೆ, ಸಹಕಾರಗಳೊಂದಿಗೆ ಹೊರಟಿರುವ ಸಾಹಸ. ನೆನಪಿರಲಿ, 'ಪುಸ್ತಕ ಪ್ರಕಾಶನ' ಕೇವಲ ಪುಸ್ತಕಗಳನ್ನು ಬಿಕರಿ ಮಾಡುವ ವ್ಯಾಪಾರಿ ಸಂಸ್ಥೆಯಲ್ಲ. ಅದೊಂದು ಗುರಿ ಮತ್ತು ಆದರ್ಶಗಳುಳ್ಳ ಉದ್ದೇಶಪೂರ್ವಕ ಸಾಹಸ.

ಈ ಅಂತರ್ಜಾಲ ತಾಣವನ್ನು ರೂಪಿಸುವಲ್ಲಿ ಶ್ರಮಿಸಿದ ತಂಡದ ಸದಸ್ಯರು

ನಮ್ಮ ಬಗ್ಗೆ | ಸಂಪರ್ಕಿಸಿ
If you cannot view this page properly click here for help / guidance.


- Copyright © 2006 - 2007 kuvempu.com -